ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಸಮೀಪದ ಅರಬಿಳಚಿ ಕ್ಯಾಂಪ್‌ನಲ್ಲಿ ಶನಿವಾರ ಸಂಜೆ ಗಣಪತಿ ಪ್ರತಿಷ್ಠಾಪನೆ ಸಮಯದಲ್ಲಿ ಡೊಳ್ಳು ಬಾರಿಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.ಗಲಾಟೆ ಬಿಡಿಸಲು ಹೋದ ಪೊಲೀಸರ ಮೇಲೆಯೂ ಹಲ್ಲೆ ನಡೆದಿದ್ದು, ನಾಗರಾಜ್ ಮತ್ತು ವಿಶ್ವ ಎಂಬುವರಿಗೆ ಏಟು ಬಿದ್ದು ಗಂಭೀರ ಸ್ವರೂಪದ ಗಾಯಗಳಾಗಿವೆ. ಜೊತೆಗೆ ಮಾಜಿ ತಾಪಂ ಸದಸ್ಯ ದಿ.ಅಣ್ಣಾಮಲೈ ಮಗ ಅರ್ಜುನ್‌ಗೂ ಹೊಡೆತ ಬಿದ್ದಿದ್ದು ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಎಎಸ್‌ಪಿ ಎ.ಜೆ.ಕಾರಿಯಪ್ಪ, ಹೊಳೆಹೊನ್ನೂರು ಠಾಣೆಯ ಪೋಲೀಸ್ ಇನ್ಸೆಪೆಕ್ಟರ್ ಆರ್.ಎಲ್.ಲಕ್ಷ್ಮೀಪತಿ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಗಲಭೆಯನ್ನು ಹತೋಟಿಗೆ ತಂದರು.ಈಗಾಗಲೇ ಠಾಣೆಯಲ್ಲಿ 3 ಪ್ರಕರಣ ದಾಖಲಾಗಿದ್ದು, ಈ ಸಂಬಂದ 22 ಜನರನ್ನು ರಾತ್ರಿಯೇ ವಶಕ್ಕೆ ಪಡೆಯಲಾಗಿದೆ. ಇನ್ನುಳಿದ ಆರೋಪಿಗಳ ಪತ್ತೆ ಕಾರ್ಯ ಚುರುಕುಗೊಳಿಸಲಾಗಿದೆ ಎಂದು ಪೋಲಿಸ್ ಮೂಲಗಳಿಂದ ತಿಳಿದು ಬಂದಿದೆ.
ಸಿಆರ್ ಪಿಎಫ್ ತುಕಡಿ ನಿಯೋಜನೆ:
ಎರಡು ಗುಂಪುಗಳ ನಡುವಿನ ಗಲಭೆಯನ್ನು ಹತೋಟಿಗೆ ತಂದ ನಂತರ ಮತ್ತೆ ಘಟನೆ ನಡೆಯದಂತೆ ರಾತ್ರಿ ಪೂರ್ತಿ ಸಿಆರ್ ಪಿಎಫ್ ತುಕಡಿಯನ್ನು ನಿಯೋಜನೆ ಮಾಡಲಾಗಿತ್ತು. ಸ್ಥಳದಲ್ಲಿ ಪೋಲೀಸರ ನಿಯೋಜನೆ ಮಾಡಿದ್ದರಿಂದ ಅಘೋಷಿತ 144 ಸೆಕ್ಷನ್ ಜಾರಿಯಾದಂತೆ ಊರಿನ ರಸ್ತೆಗಳಲ್ಲಿ ಜನರ ಓಡಾಟ ಇಲ್ಲದೆ ಖಾಲಿಖಾಲಿಯಾಗಿತ್ತು.ಎಲ್ಲ ಗಣಪತಿಗಳ ವಿಸರ್ಜನೆ:
ಶನಿವಾರ ರಾತ್ರಿ ಎರಡು ಗುಂಪುಗಳು ನಡುವೆ ಘರ್ಷಣೆ ನಡೆದು ಹಲವರಿಗೆ ಗಾಯಗಳಾಗಿದ್ದರಿಂದ, ಎಎಸ್ಪಿ ನೇತೃತ್ವದಲ್ಲಿ ಗ್ರಾಮದ ಎಲ್ಲಾ ಗಣಪತಿ ಮೂರ್ತಿಗಳನ್ನು ಶನಿವಾರ ರಾತ್ರಿಯೇ ವಿಸರ್ಜನೆ ಮಾಡಲಾಯಿತು.
*ಘಟನೆ ಹೇಗಾಯ್ತು? ಅರಬಿಳಚಿ ಕ್ಯಾಂಪ್‌ನಲ್ಲಿ ಗಣಪತಿಯನ್ನು ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪಿಸಲು ನಟೇಶ್ ಕ್ಯಾಂಪ್‌ನ ಆದಿ ಕರ್ನಾಟಕದವರ ಸಮಿತಿ ಮತ್ತು ಭೋವಿ ಕಾಲೋನಿ ಸರ್ಕಲ್ ಗಣಪತಿ ಯುವಕ ಸಂಘದ ಯುವಕರು ಗಣಪತಿ ಮೆರವಣಿಗೆ ಪ್ರತಿಷ್ಠಾಪನೆ ವೇಳೆ ಡೊಳ್ಳು ಬಾರಿಸಲು ಒಂದೇ ತಂಡದವರಿಗೆ ಹೇಳಿ ಮುಂಗಡ ನೀಡಿದ್ದರು.ಕಲಾವಿದರ ತಂಡ ಒಂದು ಕಡೆ ಡೊಳ್ಳು ಬಾರಿಸುತ್ತಿದ್ದರು. ಈ ವೇಳೆ ಇನ್ನೊಂದು ಗುಂಪಿನವರು ಬಂದು ನಾವು ಮುಂಗಡ ನೀಡಿದ್ದರೂ ಸಹಿತ ನಮ್ಮ ಕಡೆ ಬಾರದೆ ಇಲ್ಲಿ ಏಕೆ ಡೊಳ್ಳು ಬಾರಿಸುತ್ತಿದ್ದಿರಿ ಎಂದು ಪ್ರಶ್ನೆ ಮಾಡಿದೆ. ಈ ವೇಳೆ ಪರಸ್ಪರ ಮಾತಿಗೆ ಮಾತು ಬೆಳೆದಿದೆ. ಈ ಎರಡು ಸಮಿತಿಯವರ ನಡುವೆ ಹಳೆಯ ದ್ವೇಷ ಇತ್ತು ಎನ್ನಲಾಗಿದೆ. ಈ ವಾಗ್ಯುದ್ಧ ಕೊನೆಗೆ ಹೊಡೆದಾಟಕ್ಕೆ ಮುನ್ನುಡಿ ಬರೆಯಿತು. ಜಗಳ ಬಿಡಿಸಲು ಮುಂದಾದ ಪೊಲೀಸರ ಮೇಲೂ ಹಲ್ಲೆ ನಡೆಯಿತು. ಈ ವೇಳೆ ಹೆಚ್ಚುವರಿ ಪೊಲೀಸರನ್ನು ಕರೆಸಿ ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು.