ತಾಲೂಕಿನ ಮಾಯಸಂದ್ರದಲ್ಲಿ ಈರ್ವರು ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಗ್ರಾಮಸ್ಥರು ಮತ್ತು ಪೊಲೀಸರು ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭವಾರ್ತೆ ತುರುವೇಕೆರೆ

ತಾಲೂಕಿನ ಮಾಯಸಂದ್ರದಲ್ಲಿ ಈರ್ವರು ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಗ್ರಾಮಸ್ಥರು ಮತ್ತು ಪೊಲೀಸರು ಯಶಸ್ವಿಯಾಗಿದ್ದಾರೆ. ಮಾಯಸಂದ್ರದ ಕೊಲ್ಲಾಪುರದಮ್ಮ ದೇವಾಲಯದ ಬಳಿ ವಾಸವಿರುವ ಗಿರೀಶ್‌ ಎಂಬುವವರು ದೇವಾಲಯದ ಬಳಿ ತಡರಾತ್ರಿ ಈರ್ವರು ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿದ್ದಾರೆ. ಗ್ರಾಮದ ರವೀಂದ್ರ, ಮಂಜುನಾಥ್‌ ಮತ್ತು ಬಾಲಾಜಿ ಎನ್ನುವವರಿಗೆ ದೂರವಾಣಿ ಕರೆ ಮಾಡಿದ ಗಿರೀಶ್ ದೇವಾಲಯದ ಬಳಿ ಯಾರೋ ಅಪರಿಚಿತರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾರೆ. ಅಲ್ಲೇ ದ್ವಿಚಕ್ರ ವಾಹನವೂ ಇದೆ ಎಂದು ತಿಳಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಅವರು ಬೀಟ್‌ ನಲ್ಲಿದ್ದ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಗ್ರಾಮಸ್ಥರ ಸಹಕಾರದೊಂದಿಗೆ ಈರ್ವರನ್ನೂ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು. ವಿಚಾರಣೆ ಮಾಡಲಾಗಿ ಈರ್ವರೂ ಆಂಧ್ರಪ್ರದೇಶದ ಚಿತ್ತೂರಿನ ಲಕ್ಷ್ಮೀಪತಿ (36) ಮತ್ತು ಪೆದ್ದನೇನಿ ತಿರುಪತಿಸ್ವಾಮಿ (34) ಎಂದು ತಿಳಿದುಬಂದಿದೆ. ಅಲ್ಲದೇ ಇವರು ಮಾಯಸಂದ್ರ ಗ್ರಾಮದ ರಾಜಣ್ಣ ಎಂಬುವವರ ಮನೆಯನ್ನು ಅಂದೇ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿತು. ಇವರಲ್ಲಿದ್ದ ಬ್ಯಾಗ್‌ ತಪಾಸಣೆ ಮಾಡಲಾಗಿ ಹಣ, ಒಡವೆ, ಚಾಕು, ಅಪಾಯಕಾರಿ ವಸ್ತುಗಳು ಇದ್ದವೆಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ತುರುವೇಕೆರೆಯ ಸಿಪಿಐ ರೋಹಿತ್, ಪಿಎಸ್ಐ ಮೂರ್ತಿ ಭೇಟಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.