ಸಾರಾಂಶ
ದ್ವಿಚಕ್ರವಾಹನ ಕದಿಯುತ್ತಿದ್ದ ಅಂತರರಾಜ್ಯ ಕಳ್ಳರಿಬ್ಬರನ್ನು ಬಂಧಿಸಿರುವ ಅಥಣಿ ಠಾಣೆ ಪೊಲೀಸರು ಬಂಧಿತರಿಂದ 13 ವಶಪಡಿಸಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಅಥಣಿ
ದ್ವಿಚಕ್ರವಾಹನ ಕದಿಯುತ್ತಿದ್ದ ಅಂತರರಾಜ್ಯ ಕಳ್ಳರಿಬ್ಬರನ್ನು ಬಂಧಿಸಿರುವ ಅಥಣಿ ಠಾಣೆ ಪೊಲೀಸರು ಬಂಧಿತರಿಂದ 13 ವಶಪಡಿಸಿಕೊಂಡಿದ್ದಾರೆ.ಇತ್ತೀಚಿಗೆ ಅಥಣಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ದ್ವಿಚಕ್ರವಾಹನ ಕಳ್ಳತನವಾಗಿರುವ ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅಥಣಿ ಡಿಎಸ್ಪಿ ಪ್ರಶಾಂತ ಮುನ್ನೋಳ್ಳಿ ಮತ್ತು ಸಿಪಿಐ ರವೀಂದ್ರ ನಾಯ್ಕೋಡಿ ಮಾರ್ಗದರ್ಶನದಲ್ಲಿ ಅಥಣಿ ಹೆಚ್ಚುವರಿ ಪಿಎಸ್ಐ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಈಚೆಗೆ ಅಥಣಿ ಪಟ್ಟಣದ ಶಿವಾಜಿ ವೃತ್ತದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೈಕ್ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ನೆರೆಯ ಮಹಾರಾಷ್ಟ್ರದ ಜತ್ತ ತಾಲೂಕಿನ ಸಿಂಧೂರ ಗ್ರಾಮದ ಆರೋಪಿ ಅಮೋಲ ಜಿತೇಂದ್ರ ಪವಾರ್ ಕೈಚಳಕದಿಂದ ಬೈಕಗಳನ್ನು ಕದ್ದು, ಇನ್ನೋರ್ವ ಆರೋಪಿ ಅಥಣಿ ತಾಲೂಕಿನ ಮದಬಾವಿ ಗ್ರಾಮದ ಲಖನ್ ತಮ್ಮಣ್ಣ ಸುಂಗಾರೆ ಎಂಬಾತನ ಮೂಲಕ ಮಾರಾಟ ಮಾಡುತ್ತಿದ್ದರು. ಲಖನ್ ಮನೆಯಲ್ಲಿ ಆರು ಬೈಕುಗಳು ಪತ್ತೆಯಾಗಿವೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾರ್ಯಚರಣೆಯಲ್ಲಿ ಅಥಣಿ ಪೊಲೀಸ್ ಠಾಣೆ ಹೆಚ್ಚುವರಿ ಪಿಎಸ್ಐ ಎಂ.ಬಿ. ಬಿರಾದಾರ, ಪಿ.ನಾಗರಾಜ ಹಾಗೂ ಸಿಬ್ಬಂದಿ ಆರ್.ಎಸ್. ವಂಟಗುಡಿ, ಜಿ.ಆರ್. ಅಸೋದೆ , ಎಂ.ಎ. ಪಾಟೀಲ, ಎಂ.ಬಿ. ಮಹೇಷಿವಾಡಗಿ, ಝಮೀರ್ ಡಾಂಗೆ, ಈರಣ್ಣ ಮಯಣ್ಣವರ ಮತ್ತು ವಿನೋದ್ ಟಕ್ಕಣ್ಣವರ ಪಾಲ್ಗೊಂಡಿದ್ದರು. ಪೊಲೀಸರ ಈ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.