ಅತ್ಯಾಚಾರ ಮಾಡಿ ಪರಾರಿಯಾಗುತ್ತಿದ್ದ ಇಬ್ಬರ ಬಂಧನ

| Published : Apr 04 2025, 12:46 AM IST

ಸಾರಾಂಶ

ತನ್ನ ಸೋದರ ಸಂಬಂಧಿ ಜತೆ ತೆರಳುತ್ತಿದ್ದಾಗ ಅಡ್ಡಗಟ್ಟಿ ಬಿಹಾರ ಮೂಲದ ಯುವತಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗುತ್ತಿದ್ದ ಇಬ್ಬರು ಆಟೋ ಚಾಲಕರನ್ನು ಮಹದೇವಪುರ ಠಾಣೆ ಪೊಲೀಸರು ಬೆನ್ನತ್ತಿ ಬಂಧಿಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತನ್ನ ಸೋದರ ಸಂಬಂಧಿ ಜತೆ ತೆರಳುತ್ತಿದ್ದಾಗ ಅಡ್ಡಗಟ್ಟಿ ಬಿಹಾರ ಮೂಲದ ಯುವತಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗುತ್ತಿದ್ದ ಇಬ್ಬರು ಆಟೋ ಚಾಲಕರನ್ನು ಮಹದೇವಪುರ ಠಾಣೆ ಪೊಲೀಸರು ಬೆನ್ನತ್ತಿ ಬಂಧಿಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಅಸಿಫ್ ಖಾನ್ ಹಾಗೂ ಸೈಯದ್ ಮುಷಾರ್ ಬಂಧಿತರಾಗಿದ್ದು, ಕೆ.ಆರ್‌.ಪುರ ರೈಲ್ವೆ ನಿಲ್ದಾಣ ಸಮೀಪ ಬುಧವಾರ ರಾತ್ರಿ 1.30ರಲ್ಲಿ ಈ ಕೃತ್ಯ ನಡೆದಿದೆ.

ತನ್ನೂರಿಗೆ ರೈಲಿನಲ್ಲಿ ತೆರಳುವ ಮುನ್ನ ರೈಲ್ವೆ ನಿಲ್ದಾಣ ಸಮೀಪ ರಾತ್ರಿ ಊಟಕ್ಕೆ ಸಂತ್ರಸ್ತೆ ತೆರಳಿದ್ದಳು. ಆ ವೇಳೆ ಅವರಿಬ್ಬರನ್ನು ಆರೋಪಿಗಳು ಅಡ್ಡಗಟ್ಟಿ ದೌರ್ಜನ್ಯ ನಡೆಸಿದ್ದಾರೆ. ಈ ಹಲ್ಲೆ ಕೃತ್ಯವನ್ನು ನೋಡಿದ ಪೊಲೀಸ್ ನಿಯಂತ್ರಣ ಕೊಠಡಿ (ನಮ್ಮ-112)ಗೆ ಫುಡ್ ಡೆಲಿವರಿ ಬಾಯ್‌ ಕರೆ ಮಾಡಿ ತಿಳಿಸಿದ್ದಾನೆ. ತಕ್ಷಣವೇ ಆ ಮಾಹಿತಿ ಮಹದೇವಪುರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಆಗ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆ ವಿವರ: ಸಂತ್ರಸ್ತೆ ಮೂಲತಃ ಬಿಹಾರ ರಾಜ್ಯದವಳಾಗಿದ್ದು, ಕೇರಳದ ಎರ್ನಾಕುಲಂನ ಏಲಕ್ಕಿ ಎಸ್ಟೇಟ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಕೆಲಸದಿಂದ ಬೇಸರಗೊಂಡು ತನ್ನೂರಿಗೆ ಮರಳಲು ನಿರ್ಧರಿಸಿದ್ದಳು. ಕೇರಳದಿಂದ ನೇರವಾಗಿ ಬಿಹಾರಕ್ಕೆ ರೈಲು ಸೌಲಭ್ಯ ಇಲ್ಲದ ಕಾರಣಕ್ಕೆ ಬೆಂಗಳೂರಿಗೆ ಬಂದು ಇಲ್ಲಿಂದ ತೆರಳಲು ಆಕೆ ಬಂದಿದ್ದಳು. ಇದೇ ವೇಳೆ ಚೆನ್ನೈಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸೋದರ ಸಂಬಂಧಿ ಸಹ ಊರಿಗೆ ಹೊರಟ್ಟಿದ್ದ ಸಂಗತಿ ಆಕೆಗೆ ತಿಳಿಯಿತು.

ಹೀಗಾಗಿ ಕೆ.ಆರ್‌.ಪುರ ರೈಲ್ವೆ ನಿಲ್ದಾಣದಿಂದ ಇಬ್ಬರು ಒಟ್ಟಿಗೆ ಊರಿಗೆ ಹೊರಡಲು ನಿರ್ಧರಿಸಿದ್ದರು. ಬುಧವಾರ ರಾತ್ರಿ ಚೆನ್ನೈನಿಂದ ಆಕೆಯ ಸಂಬಂಧಿ, ಕೇರಳದಿಂದ ಸಂತ್ರಸ್ತೆ ಕೆ.ಆರ್.ಪುರ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ನಂತರ ಇಬ್ಬರು ರೈಲ್ವೆ ನಿಲ್ದಾಣದ ಟಿನ್ ಫ್ಯಾಕ್ಟರಿ ಸರ್ಕಲ್ ಬಳಿ ಊಟ ಮುಗಿಸಿಕೊಂಡು ರಾತ್ರಿ 1.30ರಲ್ಲಿ ರೈಲ್ವೆ ನಿಲ್ದಾಣಕ್ಕೆ ಮರಳುತ್ತಿದ್ದರು. ಅದೇ ವೇಳೆ ಆಟೋದಲ್ಲಿ ಬಂದ ಅಸಿಫ್‌ ಹಾಗೂ ಸೈಯದ್‌ ಸಂತ್ರಸ್ತೆ ಹಾಗೂ ಆಕೆಯ ಸಂಬಂಧಿಯನ್ನು ಅಡ್ಡಗಟ್ಟಿದ್ದಾರೆ. ಈ ಹಂತದಲ್ಲಿ ಪ್ರತಿರೋಧ ತೋರಿದ ಸಂತ್ರಸ್ತೆ ಸಂಬಂಧಿ ಮೇಲೆ ಸೈಯದ್ ಹಲ್ಲೆ ನಡೆಸಿ ಜೋರಾಗಿ ಕಿರುಚಿಕೊಳ್ಳದಂತೆ ಹಿಡಿದುಕೊಂಡಿದ್ದಾನೆ. ಆಗ ಸಂತ್ರಸ್ತೆಯನ್ನು ರಸ್ತೆ ಬದಿ ಎಳೆದೊಯ್ದು ಅಸಿಫ್‌ ಅತ್ಯಾಚಾರ ಎಸಗಿದ್ದಾನೆ. ಅದೇ ಸಮಯಕ್ಕೆ ಆ ರಸ್ತೆಯಲ್ಲಿ ಬಂದ ಫುಡ್‌ ಡೆಲಿವರಿ ಬಾಯ್‌, ವ್ಯಕ್ತಿ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ನೋಡಿ ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ಯಾಂಟ್ ಹಾಕಿಕೊಂಡು ಓಡಿದ್ದ ಅಸಿಫ್: ಈ ಹಲ್ಲೆ ಮಾಹಿತಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಅದೇ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಮಹದೇವಪುರ ಪೊಲೀಸ್ ಠಾಣೆಯ ಬೀಟಾ ವಾಹನದ ಹೆಡ್‌ ಕಾನ್‌ಸ್ಟೇಬಲ್ ರೇವಪ್ಪ ಅಡವಿ ಹಾಗೂ ಗೃಹ ರಕ್ಷಕ ಶಿವಾರೆಡ್ಡಿ ಧಾವಿಸಿದ್ದಾರೆ. ಪೊಲೀಸರನ್ನು ನೋಡಿದ ಕೂಡಲೇ ಸಂತ್ರಸ್ತೆಯ ಸಂಬಂಧಿಯನ್ನು ಬಿಟ್ಟು ತಪ್ಪಿಸಿಕೊಳ್ಳಲು ಯತ್ನಿಸಿದ್ದ ಸೈಯದ್‌ನನ್ನು ರೇವಪ್ಪ ಹಾಗೂ ಶಿವಾರೆಡ್ಡಿ ಸೆರೆ ಹಿಡಿದಿದ್ದಾರೆ. ಅಷ್ಟರಲ್ಲಿ ಅತ್ಯಾಚಾರ ಎಸಗಿ ಅಸಿಫ್‌ ಓಡಿ ಹೋಗಿದ್ದಾನೆ. ಈ ಅತ್ಯಾಚಾರ ಸಂಗತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಸಬ್ ಇನ್ಸ್‌ಪೆಕ್ಟರ್ ನಾಗರಾಜ್‌ ನೆಡಲಗಿ, ಹೊಯ್ಸಳ ವಾಹನದ ಎಎಸ್‌ಐ ಶಿವಾನಂದ್‌ ಹಾಗೂ ಕರುಣ ನಾಯಕ್‌ ಅವರು, ಆರೋಪಿ ಪತ್ತೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.

ಠಾಣೆಗೆ ಆಯುಕ್ತರ ಭೇಟಿ : ಪ್ರಕರಣದ ಮಾಹಿತಿ ತಿಳಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಮಹದೇವಪುರ ಠಾಣೆಗೆ ಗುರುವಾರ ಭೇಟಿ ನೀಡಿ ಪ್ರಕರಣದ ಬಗ್ಗೆ ವಿವರ ಪಡೆದರು. ಈ ವೇಳೆ ವೈಟ್‌ ಫೀಲ್ಡ್ ವಿಭಾಗದ ಡಿಸಿಪಿ ಶಿವಕುಮಾರ್‌ ಹಾಗೂ ಇನ್ಸ್‌ಪೆಕ್ಟರ್‌ ಪ್ರವೀಣ್ ಬಾಬು ಉಪಸ್ಥಿತರಿದ್ದರು.

ಆಟೋದಲ್ಲೇ ಆರೋಪಿಗಳ ವಾಸ್ತವ್ಯ : ಆರೋಪಿಗಳು ಹಲವು ದಿನಗಳಿಂದ ಕೆ.ಆರ್‌.ಪುರ ರೈಲ್ವೆ ನಿಲ್ದಾಣ ವ್ಯಾಪ್ತಿಯಲ್ಲಿ ಆಟೋ ಓಡಿಸಿಕೊಂಡು ಇದ್ದರು. ಆಟೋದಲ್ಲೇ ಇಬ್ಬರು ಉಳಿಯುತ್ತಿದ್ದರು. ಆರೋಪಿಗಳ ಪೈಕಿ ಸೈಯದ್ ವಿವಾಹವಾಗಿದ್ದು ಮಕ್ಕಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.