ರಿಮ್ಸ್‌ನಲ್ಲಿ ಎರಡು ಮಾಡ್ಯುಲರ್ ಆಪರೇಷನ್ ಥಿಯೇಟರ್: ಜಿಲ್ಲಾಧಿಕಾರಿ ನಿತೀಶ್‌ ಕೆ.

| Published : Feb 19 2025, 12:49 AM IST

ರಿಮ್ಸ್‌ನಲ್ಲಿ ಎರಡು ಮಾಡ್ಯುಲರ್ ಆಪರೇಷನ್ ಥಿಯೇಟರ್: ಜಿಲ್ಲಾಧಿಕಾರಿ ನಿತೀಶ್‌ ಕೆ.
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್‌) ಬೋಧಕ ಆಸ್ಪತ್ರೆಯಲ್ಲಿ ಹೊಸದಾಗಿ ಎರಡು ಮಾಡ್ಯುಲರ್ (ಒಟಿ) ಅಪರೇಷನ್‌ ಥಿಯೇಟರ್‌ಗಳನ್ನು ಆರಂಭಿಸಲಾಗುತ್ತಿದೆ ಎಂದು ಡಿಸಿ ನಿತೀಶ್‌ ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಇಲ್ಲಿನ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್‌) ಬೋಧಕ ಆಸ್ಪತ್ರೆಯಲ್ಲಿ ಹೊಸದಾಗಿ ಎರಡು ಮಾಡ್ಯುಲರ್ (ಒಟಿ) ಅಪರೇಷನ್‌ ಥಿಯೇಟರ್‌ ಗಳನ್ನು ಆರಂಭಿಸಲಾಗುತ್ತಿದ್ದು, ಅದೇ ರೀತಿ ಇಲ್ಲಿಯೇ ಹೃದಯಕ್ಕೆ ಸಂಬಂಧಿಸಿದ ಬೈಪಾಸ್‌ ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್‌ ಕೆ. ಅವರು ತಿಳಿಸಿದರು.ಸ್ಥಳೀಯ ಯಕ್ಲಾಸಪುರ ಸಮೀಪದ ಹೊಸ ಜಿಲ್ಲಾಡಳಿತ ಭವನದ ತಮ್ಮ ಕಚೇರಿಯಲ್ಲಿ ಹಲವಾರು ವಿಷಯಗಳ ಕುರಿತು ಮಂಗಳವಾರ ಮಾಹಿತಿ ಹಂಚಿಕೊಂಡು ಮಾತನಾಡಿದ ಡಿಸಿ ಅವರು, ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಅವರ ಸೂಚನೆ ಮೇರೆಗೆ ರಿಮ್ಸ್‌ನಲ್ಲಿ ಹೆಚ್ಚುವರಿಯಾಗಿ ಎರಡು ಮಾಡ್ಯುಲರ್‌ ಒಟಿಗಳನ್ನು ಸಿದ್ಧಪಡಿಸುತ್ತಿದ್ದು, ಅದಕ್ಕಾಗಿ 2.5 ಕೋಟಿ ರು. ವ್ಯಯಿಸಲಾಗುತ್ತಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಿಂದ 1.80 ಕೋಟಿ ಅದೇ ರೀತಿ ಜಿಲ್ಲಾಡಳಿತದ ಡಿಎಂಎಫ್‌ನಿಂದ 70 ಲಕ್ಷ ರು. ಅನುದಾನವನ್ನು ಹೊಂದಿಸಲಾಗುತ್ತಿದೆ ಎಂದರು.ರಿಮ್ಸ್‌ ಮತ್ತು ಒಪೆಕ್‌ ಆಸ್ಪತ್ರೆಯಲ್ಲಿ ಜನಸಾಮಾನ್ಯರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಲು ಈಗಾಗಲೇ ಹಲವಾರು ರೀತಿಯ ಕ್ರಮಗಳನ್ನು ವಹಿಸಲಾಗಿದೆ ಅದರಡಿಯಲ್ಲಿಯೇ ಒಪೆಕ್‌ನಲ್ಲಿ ಕ್ಯಾನ್ಸರ್‌ ಡೇ ಕೇರ್‌ ಸೆಂಟರ್‌ ಆರಂಭಿಸಿದ್ದು ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಯನ್ನು ಸ್ಥಳೀಯ ವೈದ್ಯರು ನಿಭಾಯಿಸುತ್ತಿದ್ದು, ಅರೆಕಾಲಿಕ ತಜ್ಞ ವೈದ್ಯರನ್ನು ನಿಯುಕ್ತಿ ಮಾಡಿ ಕಿಮೋ ಥೆರಪಿಯನ್ನು ಸಹ ಮಾಡಲಾಗುತ್ತಿದೆ. ಇದರೊಟ್ಟಿಗೆ ರೇಡಿಯೇಷನ್‌ ಥೆರಪಿಯನ್ನು ಸಹ ಆರಂಭಿಸುತ್ತಿದ್ದು, ಅದಕ್ಕಾಗಿ ತಜ್ಞ ವೈದ್ಯರು ನೇಮಿಸಿ ಆ ಮುಖಾಂತರ ಒಪೆಕ್‌ನಲ್ಲಿಯೇ ಕ್ಯಾನ್ಸರ್‌ ಸಂಬಂಧಿತ ಪೂರ್ಣಪ್ರಮಾಣದ ಚಿಕಿತ್ಸೆಯನ್ನು ನೀಡಲಿದ್ದು, ವಿವಿಧ ಯೋಜನೆಗಳಡಿ ಉಚಿತ ಔಷಧಿಗಳನ್ನು ಒದಗಿಸುವ ಕೆಲಸವನ್ನು ಸಹ ಮಾಡಲಾಗಿದೆ ಎಂದು ವಿವರಿಸಿದರು.18 ಕೆರೆಗಳ ಭರ್ತಿ ಕಾರ್ಯ:

ರಾಯಚೂರು ಗ್ರಾಮೀಣ ಪ್ರದೇಶದ 18 ಕೆರೆಗಳ ಭರ್ತಿಕಾರ್ಯದ ಕಾಮಗಾರಿ ಪ್ರಗತಿಯಲ್ಲಿ ಸಾಗಿದೆ. ಸುಮಾರು 200 ಕೋಟಿ ವೆಚ್ಚದಡಿ ಕೈಗೊಂಡಿರುವ ಈ ಕೆಲಸದಲ್ಲಿ ಕೃಷ್ಣಾ ನದಿಯಿಂದ 18 ಕೆರೆಗಳನ್ನು ತುಂಬಿಸಲಾಗುತ್ತಿದ್ದು, 150 ಕೋಟಿ ಕೆಲಸದ ವೆಚ್ಚ, 50 ಕೋಟಿ ನಿರ್ಹವಣೆಯಕ್ಕೆ ಮೀಸಲಿಟ್ಟಿದ್ದು ಈಗಾಗಲೇ 120 ಕೋಟಿ ಮೊತ್ತದ ಕಾಮಗಾರಿ ಪೂರ್ಣಗೊಂಡಿದ್ದು, 30 ಕೋಟಿ ಅನುದಾನವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.ಕ್ರಿಯಾ ಯೋಜನೆ : ಯಕ್ಲಾಸಪುರ ಬಳಿ ನಿರ್ಮಾಣಗೊಂಡಿರುವ ಮಿನಿ ವಿಧಾನಸೌಧ (ಹೊಸ ಜಿಲ್ಲಾಡಳಿತ ಭವನದ)ದ ಒಂದು ಹಂತದ ಕೆಲಸ ಪೂರ್ಣಗೊಂಡಿದ್ದು ಡಿಸಿ ಕಚೇರಿ ಸೇರಿ ಕೆಲ ಇಲಾಖೆಗಳನ್ನು ಸ್ಥಳಾಂತರಿಸಲಾಗಿದೆ. ಕಟ್ಟಡ ವಿಸ್ತೀರ್ಣಕ್ಕಾಗಿ 25 ಕೋಟಿ ರು. ಕ್ರಿಯಾ ಯೋಜನೆಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದ ಡಿಸಿ ಹೊಸ ಜಿಲ್ಲಾಡಳಿತ ಭವನದಲ್ಲಿ ಹಲವು ಕೆಲಸಗಳು ಬಾಕಿ ಉಳಿದಿದ್ದು ಅವುಗಳನ್ನು ಚುರುಕಾಗಿ ಪೂರ್ಣಗೊಳಿಸಲು ಗಮನ ಹರಿಸಲಾಗುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು,ಖಜಾನೆ ಸೇರಿ ಇತರೆ ಇಲಾಖೆಗಳನ್ನು ಸ್ಥಳಾಂತರಿಸಿದ್ದು ಮುಂದಿನ ಎರಡು ವಾರಗಳಲ್ಲಿ ಎಸಿ ಕಚೇರಿಯ ಕೆಲಸವನ್ನು ಪೂರ್ಣಗೊಳಿಸಲಾಗುವುದು. ಹೊಸ ಕಟ್ಟಡ ನೆಲಮಹಡಿ ಹಾಗೂ ಮೊದಲ ಮಹಡಿಯಲ್ಲಿ ಕೆಲಸ-ಕಾರ್ಯಗಳು ವೇಗವಾಗಿ ಸಾಗಿದ್ದು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.ಬೇಸಿಗೆ: ಕುಡಿಯುವ ನೀರಿನ

ಸಮಸ್ಯೆ ಆಗದಂತೆ ಜಾಗೃತಿ

ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ಜಿಲ್ಲಾ ಕೇಂದ್ರವಾದ ರಾಯಚೂರು ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಜಾಗೃತಿಯನ್ನು ವಹಿಸಲಾಗಿದೆ. ಈಗಾಗಲೇ ಜಿಪಂ ಸಿಇಒ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಅಗತ್ಯಕ್ರಮ ಕೈಗೊಂಡಿದ್ದಾರೆ. ರಾಯಚೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ರಾಂಪುರ ಕೆರೆ ಭರ್ತಿ ಮಾಡಲಾಗುತ್ತಿದೆ. ಕೃಷ್ಣಾ ನದಿಯಿಂದ ನೀರನ್ನು ಸರಬರಾಜು ಮಾಡಲು ಯಾವುದೇ ರೀತಿಯ ಅಡಚಣೆಯಾಗದಂತೆ ಹೆಚ್ಚುವರು ಮೊಟರ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್‌ ಕೆ. ತಿಳಿಸಿದರು.