ಮೂಡುಬಿದಿರೆ : ಸಮಾಜ ಸೇವೆಯನ್ನೇ ಉಸಿರಾಗಿಸಿಕೊಂಡು ಹೆಸರಾಗಿದ್ದ ಜಿ.ವಾಸುದೇವ ಪೈ ಸ್ಮರಣಾರ್ಥ ಅವರ ಮಿತ್ರ ಎಸ್.ಎನ್ ಮೂಡುಬಿದಿರೆ ಬಳಗವು 1975 ರಲ್ಲಿ ಆರಂಭಿಸಿದ್ದ ಜಿ.ವಿ.ಪೈ ಮೆಮೋರಿಯಲ್ ಟ್ರಸ್ಟ್ ಮತ್ತು ಆಸ್ಪತ್ರೆ ಸಾಧನೆಯಲ್ಲೂ ನಿರಂತರ ಬೆಳೆಯುತ್ತಲೇ ಇದೆ.

ಮಿತ ದರದಲ್ಲಿ ಗುಣಮಟ್ಟದ ಸೇವೆ ನೀಡುತ್ತಲೇ ಬಂದಿರುವ ಜಿ.ವಿ.ಪೈ ಆಸ್ಪತ್ರೆ ಒಂದು ಕಾಲಕ್ಕೆ ಹೆರಿಗೆ ಆಸ್ಪತ್ರೆ ಎಂದೇ ಖ್ಯಾತಿ ಪಡೆದಿತ್ತು. ಇದೀಗ 75 ಬೆಡ್ ಗಳ ಸರ್ವಸುಸಜ್ಜಿತ ಈ ಆಸ್ಪತ್ರೆಗೆ 2023ರಲ್ಲಿ ರೋಟರಿ ಡಯಾಲಿಸೀಸ್ ಸೆಂಟರ್ ಆರಂಭಿಸಲು 3 ಡಯಾಲಿಸೀಸ್ ಮೆಶಿನ್ ಗಳನ್ನು ಕೊಡುಗೆಯಾಗಿ ನೀಡಿತ್ತು. ಇದೀಗ ಮುಂಬೈ ಗುರ್ ಗಾಂವ್ ನ ಪ್ರಕಾಶ್ ಪೈ ದಂಪತಿ ಈ ಕೇಂದ್ರಕ್ಕೆ ಮತ್ತೆರಡು ಡಯಾಲಿಸೀಸ್ ಮೆಶಿನ್ ಗಳನ್ನು ಭಾನುವಾರ ಹಸ್ತಾಂತರಿಸಿ ನವರಾತ್ರಿಯ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ಧಾರೆ.

ಈ ಹಿಂದೆ 2024ರಲ್ಲಿ ಆಸ್ಪತ್ರೆಯ ಕಾರ್ಯವೈಖರಿಯಿಂದ ಸಂತಸಗೊಂಡ ಅವರು ತಮ್ಮ ದಾನಿಗಳ ತಂಡ ಸೋಶಿಯಲ್ ಸೇವಾ ಇನಿಶಿಯೇಟಿವ್ ಸಹಯೋಗದಲ್ಲಿ 32 ಲಕ್ಷ ರು. ವೆಚ್ಚದಲ್ಲಿ ಅಲ್ಟ್ರಾ ಸೌಂಡ್ ಆಂಡ್ ಎಕೋ ಕಾರ್ಡಿಯೋಗ್ರಫಿ ಮೆಶಿನ್ ಕೊಡುಗೆಯಾಗಿ ನೀಡಿದ್ದರು. ಇಂದು ಜಿ.ವಿ.ಪೈ ಸೂಪರ್ ಸ್ಪೆಶಾಲಿಟಿ ಸೌಲಭ್ಯಗಳನ್ನು ಬಿಟ್ಟರೆ ಉಳಿದೆಲ್ಲವನ್ನೂ ನಿಭಾಯಿಸುವ ತಂಡ ಕಟ್ಟಿಕೊಂಡಿದೆ.

ದುಬಾರಿ ಚಿಕಿತ್ಸೆಯಾಗಿರುವ ಡಯಾಲಿಸೀಸ್ ಈ ಆಸ್ಪತ್ರೆಯಲ್ಲಿ ಕೇವಲ 400 ರು. ಗೆ ಲಭ್ಯ. ಕಾರಣ ವೆಚ್ಚಗಳನ್ನೆಲ್ಲ ದಾನಿಗಳು ಭರಿಸಲು ಸರತಿ ಸಾಲಲ್ಲಿ ನಿಂತಂತಿದೆ.

ಬಿಪಿಎಲ್ ರೋಗಿಗಳಿಗೆ ಪಾಂಗಾಳ ನಾಯಕ್ಸ್ ಫ್ಯಾಮಿಲಿ ಟ್ರಸ್ಟ್ ಒಂದು ಡಯಾಲಿಸೀಸ್ ಗೆ 600 ರು. ನೆರವು ನೀಡಿದರೆ ಆಸ್ಪತ್ರೆಯ ಟ್ರಸ್ಟ್ ವತಿಯಿಂದ ಎಪಿಎಲ್ ಕಾರ್ಡುದಾರರಿಗೂ ಇದೇ ನೆರವು ಲಭ್ಯವಾಗಿದೆ. ಮೂಡುಬಿದಿರೆಯ ಸಮಾಜ ಮಂದಿರ ಸಭಾದ ವತಿಯಿಂದಲೂ ಈ ಯೋಜನೆಗೆ ಕೊಡುಗೆ ಸಲ್ಲಿಸುವ ಇರಾದೆಯನ್ನು ಜಿ.ವಿ.ಪೈ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಕೆ. ಅಭಯಚಂದ್ರ ಜೈನ್ ಈ ಸಂದರ್ಭ ಪ್ರಕಟಿಸಿದ್ದಾರೆ. ಆಸ್ಪತ್ರೆಯ ಪ್ರಗತಿಗೆ ಆರ್ಥಿಕವಾಗಿ ಆಧರಿಸಿರುವ ಮೂಡುಬಿದಿರೆ ಸೊಸೈಟಿ ವತಿಯಿಂದಲೂ ಡಯಾಲಿಸೀಸ್ ಯೋಜನೆಗೆ ನೆರವಾಗುವ ಬಗ್ಗೆ ನಿರ್ಧರಿಸಲಾಗುವುದು ಎಂದು ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಪ್ರಕಟಿಸಿದ್ದಾರೆ. ಮುಂದಿನ ಯೋಜನೆಗಳೇನು?: ಎರಡು ಡಯಾಲಿಸಿಸ್ ಮೆಶಿನ್ ಹಸ್ತಾಂತರಿಸುವ ಸರಳ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಪಿ.ಎಸ್.ಭಟ್ ಬ್ಲಾಕ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ದಾನಿ ಪ್ರಕಾಶ್ ಪೈ ಗ್ರಾಮೀಣ ಆರೋಗ್ಯ ನಮಗೆ ಆಸಕ್ತಿ ಮತ್ತು ಆದ್ಯತೆಯ ಕ್ಷೇತ್ರವಾಗಿತ್ತು. ನಮ್ಮ ಹೂಡಿಕೆಯಲ್ಲಿ ರೋಗಿಗಳ ಸಂತಸವೇ ನಮಗೆ ಡಿವಿಡೆಂಡ್ ಎಂದ ಅವರು ಇನ್ನೇನು ಅಗತ್ಯವಿದೆ ಹೇಳಿ ಎನ್ನುವ ಉತ್ಸಾಹದಲ್ಲಿ ವಾಟ್ ನೆಕ್ಟ್ಸ್? ಎಂದು ಮಾತು ಮುಗಿಸಿದರು.


ಪಾಂಗಾಳ ನಾಯಕ್ಸ್ ಟ್ರಸ್ಟ್ ನ ಸುರೇಶ್ ನಾಯಕ್ ಈ ಸೇವೆ ಖುಷಿ ಕೊಟ್ಟಿದೆ. ಡಯಾಲಿಸೀಸ್ ಚಿಕಿತ್ಸೆಗೆ ಹೆಚ್ಚಿನವರಿಗೆ ನೆರವಾಗಲು ಆರ್ಥಿಕ ನೆರವನ್ನು ಹೆಚ್ಚಿಸುವುದಾಗಿ ಪ್ರಕಟಿಸಿದ್ಧಾರೆ. ರೋಟರಿ ಕ್ಲಬ್ ಎಸಿಸ್ಟೆಂಟ್ ಗವರ್ನರ್ ಶ್ರೀಕಾಂತ್ ಕಾಮತ್ ರೋಟರಿ ಕೊಡುಗೆಗಳು ಆಸ್ಪತ್ರೆಯಲ್ಲಿ ಸದುಪಯೋಗವಾಗುತ್ತಿವೆ. ಇನ್ನಷ್ಟು ಹೊಸ ಯೋಜನೆಗಳನ್ನು ಕೊಡುಗೆ ನೀಡುವ ಉತ್ಸಾಹವಿದ್ದು ವಾಟ್ ನೆಕ್ಸ್ಟ್ ಎನ್ನುವ ಪ್ರಶ್ನೆಗೆ ರೋಟರಿ ನೆರವಿನ ಹಸ್ತದೊಂದಿಗೆ ಸಿದ್ಧವಾಗಲಿದೆ ಎಂದರು. ಮೂಡುಬಿದಿರೆ ರೋಟರಿ ಅಧ್ಯಕ್ಷ ಡಾ. ಆಶೀರ್ವಾದ್ , ವಿಜಯಾ ಪೈ, ದೀಪಾ ಭಂಡಾರಿ, ವಿಜಯಲಕ್ಷ್ಮೀ ಮಲ್ಯ, ಶಾಲಿನಿ ಹರೀಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಟ್ರಸ್ಟ್ ಕಾರ್ಯದರ್ಶಿ ಡಾ. ಹರೀಶ್ ನಾಯಕ್ ಪ್ರಗತಿಯ ಹೆಜ್ಜೆ ಗುರುತುಗಳ ಕುರಿತು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಟ್ರಸ್ಟ್ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಡಾ. ಮುರಳೀಕೃಷ್ಣ ನಿರೂಪಿಸಿದರು.

ಡಯಾಲಿಸೀಸ್ ಸೆಂಟರ್‌ಗೆ ಹೆಚ್ಚಿನ ಬೇಡಿಕೆ !ಜಿವಿಪೈ ಆಸ್ಪತ್ರೆಯ ಡಯಾಲಿಸೀಸ್ ಸೆಂಟರ್ ಮಿತ ದರ ಮತ್ತು ಗುಣಮಟ್ಟದ ಸೇವೆಯಿಂದ ಹೆಚ್ಚಿನವರ ಆದ್ಯತೆಯಾಗಿದೆ. 2023 ರಲ್ಲಿ 1051, 2024 ರಲ್ಲಿ 1357, 2025 ರಲ್ಲಿ 1913 ಮತ್ತು ಈ ವರ್ಷ ಈಗಾಗಲೇ ಸಂಖ್ಯೆ 1751 ರ ಗಡಿ ದಾಟಿದೆ. ರೋಗಿಗಳ ಸಂಖ್ಯೆ ಹೆಚ್ಚಾಗಿರುವುದು ಸಂಭ್ರಮಿಸುವ ಸಾಧನೆಯಲ್ಲ. ಆದರೆ ಅಗತ್ಯವಿದ್ದವರಿಗಾಗಿ ನಾವು ತಲುಪಿದ್ದೇವೆ ಎನ್ನುವ ಧನ್ಯತೆ. ಕ್ರಾನಿಕಲ್ ಕಿಡ್ನಿ ಕಾಯಿಲೆ ಯ ರೋಗಿಗಳು ಹೆಚ್ಚುತ್ತಲೇ ಇದ್ದಾರೆ ಬಿಪಿಶುಗರ್ ನಿಯಂತ್ರಿಸುವುದೇ ಇದಕ್ಕೆ ಪರಿಹಾರ ಎಂದು ತಜ್ಞ ಡಾ. ಜನಾರ್ಧನ ಕಾಮತ್ ಹೇಳಿದರು. ಟೆಕ್ನೀಶಿಯನ್ ನಿರೀಕ್ಷಾ ಪೂಜಾರಿ , ಯಶೋಧಾ, ನಿಶಾ ಮತ್ತು ಕಾವ್ಯ ಬಳಗದ ಸೇವೆ ಚಿಕಿತ್ಸಾ ಕೇಂದ್ರದ ವಿಶೇಷತೆ ಎಂದವರು ಹೇಳಿದರು. ಜಿ.ವಿ.ಪೈ ಅವರಂಥಹ ಸಮಾಜ ಸೇವಕರ ಹೆಸರಲ್ಲಿ 1975ರಲ್ಲಿ ಈ ಸೇವಾ ಮನೋಭಾವದ ಆಸ್ಪತ್ರೆಯನ್ನು ಮಣಿಪಾಲದ ಶಿಲ್ಪಿ ಡಾ. ಟಿ.ಎಂ.ಎ.ಪೈ ಉದ್ಘಾಟಿಸಿದ್ದರು ಎನ್ನುವುದೂ ವಿಶೇಷ.