ಸಾರಾಂಶ
ಅಯ್ಯಪ್ಪ ಮಾಲಾಧಾರಿಗಳಿಗೆ ಕೆಎಂಸಿಆರ್‌ಐನ ವೈದ್ಯರ ತಂಡ ಉತ್ತಮ ಚಿಕಿತ್ಸೆ ನೀಡುತ್ತಿದೆ. ಗಾಯಾಳುಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಇವತ್ತು ಆಹಾರ ಕೇಳುತ್ತಿದ್ದಾರೆ. ಆದರೆ ಆಹಾರ ಎಷ್ಟು ಕೊಡಬೇಕು ಎಂಬ ಬಗ್ಗೆ ನಾವು ಸಲಹೆ ನೀಡಿದ್ದೇವೆ ಎಂದು ಬೆಂಗಳೂರಿನಿಂದ ಬಂದ ವೈದ್ಯರು ಹೇಳಿದ್ದಾರೆ.
ಹುಬ್ಬಳ್ಳಿ:
ಸಿಲಿಂಡರ್ ಸೋರಿಕೆಯಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಾಯಗೊಂಡ 9 ಜನ ಅಯ್ಯಪ್ಪ ಮಾಲಾಧಾರಿಗಳ ಚಿಕಿತ್ಸೆ ಕೆಎಂಸಿಆರ್‌ಐನಲ್ಲಿ ಮುಂದುವರಿದಿದೆ. ಬುಧವಾರ ಕೂಡ ಮತ್ತಿಬ್ಬರು ತಜ್ಞ ವೈದ್ಯರು ಆಗಮಿಸಿ ಗಾಯಾಳುಗಳ ಚಿಕಿತ್ಸೆಗೆ ಕೆಲವೊಂದಿಷ್ಟು ಸಲಹೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮುತುವರ್ಜಿ ವಹಿಸಿ ಬೆಂಗಳೂರಿನಿಂದ ತಜ್ಞ ವೈದ್ಯರ ತಂಡ ಕರೆಸಿದ್ದಾರೆ.ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಪಾಸ್ಟಿಕ್ ಸರ್ಜನ್ ಡಾ. ಕೆ.ಟಿ. ರಮೇಶ, ಬಿಎಂಸಿಆರ್‌ಆರ್‌ಐ ಪ್ಲಾಸ್ಟಿಕ್ ಸರ್ಜನ್ ಡಾ. ಎಂ. ಶಂಕ್ರಪ್ಪ ಬುಧವಾರ ಬೆಳಿಗ್ಗೆ ಆಗಮಿಸಿ ಪರೀಕ್ಷಿಸಿದರು. ಬಳಿಕ ಗಾಯಾಳುಗಳ ಕೊಡುತ್ತಿರುವ ಚಿಕಿತ್ಸೆಯ ವಿವರ ಪಡೆದರು.
ಬಳಿಕ ಮಾತನಾಡಿದ ಶಂಕ್ರಪ್ಪ, ಈಗಾಗಲೇ ಕೆಎಂಸಿಆರ್‌ಐನ ವೈದ್ಯರ ತಂಡ ಉತ್ತಮ ಚಿಕಿತ್ಸೆ ನೀಡುತ್ತಿದೆ. ಗಾಯಾಳುಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಇವತ್ತು ಆಹಾರ ಕೇಳುತ್ತಿದ್ದಾರೆ. ಆದರೆ ಆಹಾರ ಎಷ್ಟು ಕೊಡಬೇಕು ಎಂಬ ಬಗ್ಗೆ ನಾವು ಸಲಹೆ ನೀಡಿದ್ದೇವೆ. ಇಲ್ಲಿ ಇಂಟರ್‌ನ್ಯಾಷನಲ್ ಪ್ರೋಟೋಕಾಲ್ ಪ್ರಕಾರ ಚಿಕಿತ್ಸೆ ನೀಡಲಾಗುತ್ತಿದೆ. ಎಂಟು ಜನರ ಸ್ಥಿತಿ ಗಂಭೀರವಾಗಿದೆ. 3 ವಾರಗಳ ಕಾಲ ಅಪಾಯಕಾರಿ. ಅವರ ಬಗ್ಗೆ ಇನ್ನೂ ಏನನ್ನೂ ಹೇಳಲು ಬರುವುದಿಲ್ಲ. ಸರ್ಕಾರ ಹಾಗೂ ಸಚಿವ ಸಂತೋಷ ಲಾಡ್ ಅವರ ಸೂಚನೆ ಮೇರೆಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದೇವೆ ಎಂದು ತಿಳಿಸಿದರು.ಬೆಂಗಳೂರಿನಿಂದ ಮಂಗಳವಾರವೂ ಡಾ. ಸ್ಮೀತಾ ಬಂದು ಪರೀಕ್ಷಿಸಿ ತೆರಳಿದ್ದರು. ಈ ನಡುವೆ ಬೆಂಗಳೂರಿನಿಂದ ಬಂದ ವೈದ್ಯ ತಂಡಕ್ಕೆ ಗಾಯಾಳುಗಳ ಕುಟುಂಬಸ್ಥರು ಹೇಗಾದರೂ ಮಾಡಿ ನಮ್ಮ ಮಕ್ಕಳನ್ನು ಬದುಕಿಸಿಕೊಡಿ ಎಂದು ಕಣ್ಣೀರು ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವೈದ್ಯರ ತಂಡ ಅವರಿಗೆ ಸಮಾಧಾನ ಮಾಡಿ ಅಲ್ಲಿಂದ ತೆರಳಿತು.
ಈ ನಡುವೆ 9 ಜನರಲ್ಲಿ 8 ಜನರಿಗೆ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಬ್ಬನಿಗೆ ಬರ್ನ್ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ. 8 ಜನರ ಸ್ಥಿತಿ ಗಂಭೀರವಾಗಿದೆ. ಎಲ್ಲರಿಗೂ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೆಎಂಸಿಆರ್‌ಐನ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ತಿಳಿಸಿದರು.