ಪ್ರತ್ಯೇಕ ಪ್ರಕರಣದಲ್ಲಿ ಲಂಚ ಪಡೆಯುವಾಗ ಇಬ್ಬರು ಸರ್ಕಾರಿ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. 20 ಸಾವಿರ ರು. ಲಂಚ ಪಡೆಯುವಾಗ ಬೆಂಗಳೂರು ದಕ್ಷಿಣ ವಿಭಾಗದ ಉಪ ಮುಖ್ಯ ವಿದ್ಯುತ್ ನಿರೀಕ್ಷಕ ಸಿದ್ದಪ್ಪ ಎಂಬುವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರತ್ಯೇಕ ಪ್ರಕರಣದಲ್ಲಿ ಲಂಚ ಪಡೆಯುವಾಗ ಇಬ್ಬರು ಸರ್ಕಾರಿ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. 20 ಸಾವಿರ ರು. ಲಂಚ ಪಡೆಯುವಾಗ ಬೆಂಗಳೂರು ದಕ್ಷಿಣ ವಿಭಾಗದ ಉಪ ಮುಖ್ಯ ವಿದ್ಯುತ್ ನಿರೀಕ್ಷಕ ಸಿದ್ದಪ್ಪ ಎಂಬುವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ಹೆಗ್ಗನಹಳ್ಳಿ ನಿವಾಸಿಯಾದ ವಿದ್ಯುತ್ ಗುತ್ತಿಗೆದಾರ ರಘುರಾಜ್ ಎಂಬುವರು ಅಪಾರ್ಟ್‌ಮೆಂಟ್ ಕಟ್ಟಡದ ಆವರ್ತಕ ಪರಿಶೀಲನೆ ನಡೆಸುವಂತೆ ಅರ್ಜಿ ಸಲ್ಲಿದ್ದರು. ಆ ಅಪಾರ್ಟ್‌ಮೆಂಟ್ ಕಟ್ಟಡದ ಆವರ್ತಕ ಪರಿಶೀಲನೆ ನಡೆಸಿ ಕಡತ ವಿಲೇವಾರಿ ಮಾಡಲು ಸಿದ್ದಪ್ಪ ಅವರು ₹20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ರಘುರಾಜ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಸಿದ್ದಪ್ಪ 20 ಸಾವಿರ ಲಂಚ ಪಡೆಯುವಾಗ ಸೋಮವಾರ ಸಾಕ್ಷಿ ಸಮೇತ ಬಂಧಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾನೂನು ಮಾಪನ ಇಲಾಖೆಯ ಅಧಿಕಾರಿ ಸೆರೆ:ಮತ್ತೊಂದು ಪ್ರಕರಣದಲ್ಲಿ 5 ಸಾವಿರ ಲಂಚ ಪಡೆಯುವಾಗ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಕಾನೂನು ಮಾಪನಶಾಸ್ತ್ರ ಇಲಾಖೆಯ, ಮಾಪನ ಭವನದ ಸಹಾಯಕ ನಿಯಂತ್ರಕರಾದ ಎಂ.ಎಸ್.ವಾಣಿಶ್ರೀ ಬಂಧಿತರು.
ಮೊಬೈಲ್ ಆಕ್ಸೆಸರೀಸ್ ಪ್ಯಾಕೇಜಿಂಗ್ ಪರವಾನಗಿ ಪಡೆಯಲು ಆರ್.ಎಸ್.ಪಾಳ್ಯ ನಿವಾಸಿ ಕಿರಣ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಪರವಾನಗಿ ಅನುಮೋದನೆ ನೀಡಲು ವಾಣಿಶ್ರೀ ಅವರು 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಕಿರಣ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ವಾಣಿಶ್ರೀ ಅವರು 5 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆರೋಪಿತರನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.