ಸಾರಾಂಶ
ಉಳ್ಳಾಲ : ಮುತ್ತೂಟ್ ಫೈನಾನ್ಸ್ ದರೋಡೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ದೇರಳಕಟ್ಟೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಅದೃಷ್ಟವಶಾತ್ ಖದೀಮರು ಬೀಗ ಒಡೆಯುತ್ತಿರುವಾಗಲೇ ಫೈನಾನ್ಸ್ ಮಳಿಗೆಯ ಸೈರನ್ ಮೊಳಗಿದ್ದು, ಸ್ಥಳಕ್ಕೆ ಧಾವಿಸಿದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಪರಾರಿ ಆಗಿದ್ದಾನೆ.
ಶನಿವಾರ ತಡರಾತ್ರಿ ಸುಮಾರು 1.30ಕ್ಕೆ ಘಟನೆ ನಡೆದಿದೆ. ದೇರಳಕಟ್ಟೆ ಜಂಕ್ಷನ್‌ನಲ್ಲಿರುವ ಮುತ್ತೂಟ್ ಫೈನಾನ್ಸ್‌ಗೆ ಕೇರಳ ಮೂಲದ ಮೂವರು ಖದೀಮರು ಕನ್ನ ಹಾಕಿದ್ದಾರೆ. ಕಳ್ಳತನ ನಡೆಸಲು ಮಳಿಗೆಯ ಬೀಗ ಒಡೆಯುತ್ತಿರುವಾಗಲೇ ಸೈರನ್ ಮೊಳಗಿದ್ದು, ಮುತ್ತೂಟ್ ಫೈನಾನ್ಸ್‌ನ ಕಂಟ್ರೋಲ್ ರೂಂಗೆ ತಂತ್ರಜ್ಞಾನದ ಮೂಲಕ ಮಾಹಿತಿ ರವಾನೆಯಾಗಿದೆ. ಫೈನಾನ್ಸ್‌ನ ಮೇಲಾಧಿಕಾರಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸೈರನ್ ಮೊಳಗುತ್ತಿದ್ದಾಗಲೇ ಫೈನಾನ್ಸ್ ಸುತ್ತ ಮುತ್ತಲೂ ಸ್ಥಳೀಯರು ಜಮಾಯಿಸಿದ್ದಾರೆ. ಈ ವೇಳೆ ಆರೋಪಿಗಳಾದ ಕಾಂಞಂಗಾಡ್‌ನ ಮುರಳಿ ಮತ್ತು ಕಾಸರಗೋಡಿನ ಹರ್ಷಾದ್ ಕಟ್ಟಡದಲ್ಲಿ ಲಾಕ್ ಆಗಿದ್ದಾರೆ.
ಸ್ಥಳಕ್ಕೆ ಧಾವಿಸಿದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳು ಮತ್ತು ಕೃತ್ಯ ಎಸಗಲು ತಂದಿದ್ದ ಡ್ರಿಲ್ ಮಷಿನ್ ಅನ್ನು ವಶಕ್ಕೆ ಪಡೆದಿದ್ದಾರೆ. ಮತ್ತೋರ್ವ ಆರೋಪಿ ಕಾಸರಗೋಡು ಮೂಲದ ಅಬ್ದುಲ್ ಲತೀಫ್ ಪರಾರಿ ಆಗಿದ್ದಾನೆ.
ಮುರಳಿ ಮತ್ತು ಅಬ್ದುಲ್ ಲತೀಫ್ ಎಂಬ ಆರೋಪಿಗಳು ಕೇರಳದಲ್ಲಿ ಈ ಹಿಂದೆ ನಡೆದಿದ್ದ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದರೆಂದು ಮಾಹಿತಿ ಲಭಿಸಿದೆ.
ಕಳೆದ ಜನವರಿಯಲ್ಲಿ ಕೆ.ಸಿ ರಸ್ತೆಯ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಶಾಖೆಯಲ್ಲಿ ನಡೆದಿದ್ದ ದರೋಡೆಯು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ದೇರಳಕಟ್ಟೆಯ ಮುತ್ತೂಟ್ ಫೈನಾನ್ಸ್‌ನಲ್ಲಿ ಉತ್ಕೃಷ್ಟ ಗುಣಮಟ್ಟದ ರಕ್ಷಣಾ ಸಲಕರಣೆ ಅಳವಡಿಸಿದ ಪರಿಣಾಮ ಸಂಭವನೀಯ ದರೋಡೆ ಪ್ರಕರಣವೊಂದು ವಿಫಲವಾಗಿದೆ.
ಘಟನಾ ಸ್ಥಳಕ್ಕೆ ಎಸಿಪಿ ಧನ್ಯ ನಾಯಕ್, ಕೊಣಾಜೆ ಇನ್ಸ್‌ಸ್ಪೆಕ್ಟರ್ ರಾಜೇಂದ್ರ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
;Resize=(128,128))
;Resize=(128,128))
;Resize=(128,128))