ಸಾರಾಂಶ
ಮನೆಯಂಗಳದಲ್ಲಿ ಒಣಗಿಸಲು ಹಾಕಲಾಗಿದ್ದ ಅಡಿಕೆಯನ್ನು ಸೋಮಸುಂದರ್ ಅವರು ರಾಶಿ ಮಾಡುತ್ತಿದ್ದರು. ಆಗ ಅವರಿಗೆ ಸಿಡಿಲು ಬಡಿದಿದೆ.
ಸುಬ್ರಹ್ಮಣ್ಯ: ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ. ಮಳೆಗೆ ಕರಾವಳಿಯಲ್ಲಿ ಇದು ಎರಡನೇ ದುರಂತವಾಗಿದೆ. ಇತ್ತೀಚೆಗೆ ಕಾರ್ಕಳದಲ್ಲಿ ಮೊದಲ ಸಾವು ಸಂಭವಿಸಿತ್ತು.
ಸುಬ್ರಹ್ಮಣ್ಯ ಗ್ರಾಮದ ಪರ್ವತಮುಖಿ ನಿವಾಸಿ ಸೋಮಸುಂದರ್ (೩೪) ಮೃತರು. ಶುಕ್ರವಾರ ಸಂಜೆ ಸುಬ್ರಹ್ಮಣ್ಯ ಪರಿಸರದಲ್ಲಿ ಮಳೆ ಆರಂಭಕ್ಕೂ ಮೊದಲು ಗಾಳಿ, ಗುಡುಗು ಆರಂಭಗೊಂಡಿದ್ದು ಈ ವೇಳೆ ಮನೆಯಂಗಳದಲ್ಲಿ ಒಣಗಿಸಲು ಹಾಕಲಾಗಿದ್ದ ಅಡಿಕೆಯನ್ನು ಸೋಮಸುಂದರ್ ಅವರು ರಾಶಿ ಮಾಡುತ್ತಿದ್ದರು. ಆಗ ಅವರಿಗೆ ಸಿಡಿಲು ಬಡಿದಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ಸೋಮಸುಂದರ್ ಸುಬ್ರಹ್ಮಣ್ಯ ಸಮೀಪ ಕಾರ್ ವಾಷಿಂಗ್ ಉದ್ಯಮ ನಡೆಸಿಕೊಂಡಿದ್ದು, ೧೦ ದಿನಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೃತರು ತಾಯಿ, ತಂಗಿ, ಪತ್ನಿಯನ್ನು ಅಗಲಿದ್ದಾರೆ.ಕೊಡಗಿನಲ್ಲಿ ಸಿಡಿಲು ಬಡಿದು ಕಾರ್ಮಿಕ ಸಾವು
ಮಡಿಕೇರಿ: ಸಿಡಿಲು ಬಡಿದು ವ್ಯಕ್ತಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಟ್ಟಗೇರಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಅಸ್ಸಾಂ ಕಾರ್ಮಿಕ ಪ್ರಮಾತ್ ಗರ್ಮಾನಿ (37) ಮೃತ ವ್ಯಕ್ತಿ. ಅವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಶುಕ್ರವಾರ ಸಂಜೆ ಮನೆಯ ಹೊರಭಾಗದಲ್ಲಿ ನಿಂತಿದ್ದ ಸಂದರ್ಭ ಸಿಡಿಲು ಬಡಿದಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವು ಸಂಭವಿಸಿದೆ. ಇದರೊಂದಿಗೆ ದ.ಕ. ಹಾಗೂ ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಸಿಡಿಲಿಗೆ ಇಬ್ಬರು ಮೃತಪಟ್ಟಂತಾಗಿದೆ.