ಹುಲಿ ಉಗುರಿನ ಲಾಕೆಟ್ ಹೊಂದಿದ್ದ ಇಬ್ಬರು ಅರ್ಚಕರ ಬಂಧನ

| Published : Oct 27 2023, 12:30 AM IST

ಹುಲಿ ಉಗುರಿನ ಲಾಕೆಟ್ ಹೊಂದಿದ್ದ ಇಬ್ಬರು ಅರ್ಚಕರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಹುಲಿ ಉಗುರಿನ ಲಾಕೆಟ್ ಹೊಂದಿದ್ದ ಇಬ್ಬರು ಅರ್ಚಕರ ಬಂಧನ

ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಮಾರ್ಕಾಂಡೇಶ್ವರ ದೇವಸ್ಥಾನದ ಅರ್ಚಕರು

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಹುಲಿ ಉಗುರಿನ ಲಾಕೆಟ್ ಹೊಂದಿದ್ದ ಇಬ್ಬರು ಅರ್ಚಕರನ್ನು ಬುಧವಾರ ತಡರಾತ್ರಿ ಬಾಳೆಹೊನ್ನೂರು ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿ ಹುಲಿ ಉಗುರಿನ ಲಾಕೆಟ್ ಅನ್ನು ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಮಾರ್ಕಾಂಡೇಶ್ವರ ದೇವಸ್ಥಾನದ ಅರ್ಚಕರಾದ ನಾಗೇಂದ್ರ ಜೋಯಿಸ್ (72), ಬಿ.ವಿ.ಕೃಷ್ಣಾನಂದ ಹೊಳ್ಳ (41) ಬಂಧಿತ ಆರೋಪಿಗಳು.

ನಾಗೇಂದ್ರ ಜೋಯಿಸ್ ಅವರ ಬಳಿ ಹುಲಿ ಉಗುರು ಹೊಂದಿರುವ ಲಾಕೆಟ್ ಇರುವ ಬಗ್ಗೆ ಅಪರಿಚಿತರು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮೇಲ್ ಮೂಲಕ ಮಾಹಿತಿ ನೀಡಿದ್ದಾರೆ. ಮತ್ತೋರ್ವ ಆರೋಪಿ ಕೃಷ್ಣಾನಂದ ಅವರ ಬಳಿ ಲಾಕೆಟ್ ಇರುವ ಬಗ್ಗೆ ಸ್ಥಳೀಯರೊಬ್ಬರು ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ವಲಯ ಇಲಾಖೆ ಅಧಿಕಾರಿಗಳು ಬುಧವಾರ ರಾತ್ರಿ ಇಬ್ಬರ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದಾಗ ಹುಲಿ ಉಗುರು ಹೊಂದಿರುವ ಲಾಕೆಟ್‌ಗಳು ಪತ್ತೆಯಾಗಿದೆ.

ನಾಗೇಂದ್ರ ಜೋಯಿಸ್ ಬಳಿ 2 ಹುಲಿ ಉಗುರು, ಕೃಷ್ಣಾನಂದ ಬಳಿ 1 ಹುಲಿ ಉಗುರುಗಳು ಪತ್ತೆಯಾಗಿವೆ. ಚಿಕ್ಕಮಗ ಳೂರು ತಾಲೂಕಿನ ಖಾಂಡ್ಯದ ಇತಿಹಾಸ ಪ್ರಸಿದ್ಧ ಮಾರ್ಕಾಂಡೇಶ್ವರ ದೇವಸ್ಥಾನದಲ್ಲಿ ಈ ಇಬ್ಬರು ಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇಬ್ಬರೂ ಅರ್ಚಕರೂ ತಮಗೆ ದೇವಸ್ಥಾನಕ್ಕೆ ಬರುವ ಅಪರಿಚಿತ ಭಕ್ತರು ಉಡುಗೊರೆ ರೂಪದಲ್ಲಿ ನೀಡಿದ್ದಾರೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ.

ಆರೋಪಿಗಳ ವಿರುದ್ಧ ಬಾಳೆಹೊನ್ನೂರು ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರಿಂದ ವಶಪಡಿಸಿಕೊಂಡಿರುವ ಹುಲಿ ಉಗುರುಗಳನ್ನು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಲಾಗುವುದು. ಆರೋಪಿಗಳನ್ನು ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸಿಎಫ್ ಚೇತನ್ ಗಸ್ತಿ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಆರ್‌ಎಫ್‌ಓ ಸಂದೀಪ್, ಡಿಆರ್‌ಎಫ್‌ಓ ಮಂಜುನಾಥ್ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು ಎಂದು ಎಸಿಎಫ್ ಚೇತನ್ ತಿಳಿಸಿದ್ದಾರೆ.

ಕಠಿಣ ಕ್ರಮ ನಿಶ್ಚಿತ: ಈ ಭಾಗದಲ್ಲಿ ಕೆಲವು ವ್ಯಕ್ತಿಗಳು ಹುಲಿ ಉಗುರನ್ನು ಹೊಂದಿರುವ ಕುರಿತು ಈಗಾಗಲೇ ಇಲಾಖೆಗೆ ಮಾಹಿತಿ ಲಭ್ಯವಾಗಿದ್ದು, ಇಲಾಖೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದೆ. ಹುಲಿ ಉಗುರು ಹೊಂದಿರುವ ಆರೋಪಿಗಳ ಮಾಹಿತಿ ಕಲೆ ಹಾಕಿ ಕಠಿಣ ಕ್ರಮಕೈಗೊಳ್ಳುವುದು ನಿಶ್ಚಿತ. ಇದು ಎಲ್ಲಿಂದ ಪೂರೈಕೆಯಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು ಎಂದು ಎಸಿಎಫ್ ಚೇತನ್ ಗಸ್ತಿ ತಿಳಿಸಿದ್ದಾರೆ. ೨೬ಬಿಹೆಚ್‌ಆರ್ ೧

ಬಾಳೆಹೊನ್ನೂರು ಸಮೀಪದ ಖಾಂಡ್ಯ ಮಾರ್ಕಾಂಡೇಶ್ವರ ದೇವಸ್ಥಾನದ ಅರ್ಚಕರಾದ ನಾಗೇಂದ್ರ ಜೋಯಿಸ್, ಕೃಷ್ಣಾನಂದ (ಬಿಳಿ ಪಂಚೆ ಉಟ್ಟು ನಿಂತಿರುವವರು) ಹುಲಿ ಉಗುರನ್ನು ಹೊಂದಿರುವ ಆರೋಪದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ೨೬ಬಿಹೆಚ್‌ಆರ್ ೨: ವಶಪಡಿಸಿಕೊಂಡಿರುವ ಹುಲಿ ಉಗುರು ಹೊಂದಿರುವ ಎರಡು ಲಾಕೆಟ್.