ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನದ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಒಂದೇ ಕಾಮಗಾರಿಗೆ ಎರಡು ಯೋಜನೆ ಅನುದಾನ ಬಳಕೆ ಮಾಡಿಕೊಂಡಿದ್ದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ವ್ಯವಸ್ಥಾಪನ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಿಎಂಎಫ್ ಹಾಗೂ ಕೆಎಂಇಆರ್‌ಸಿ ಅಡಿ ಶಾಲಾ ಕೊಠಡಿ, ಶಾಲೆಗಳಲ್ಲಿ ಶೌಚಾಲಯ, ಹೈಮಾಸ್ಟ್ ದೀಪ ಅಳವಡಿಕೆ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಹಳ್ಳಿಗಳ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಕಾಮಗಾರಿಗಳು ಈ ಎರಡು ಯೋಜನೆಗಳಲ್ಲಿ ಪುನಾರವರ್ತನೆಯಾಗಬಾರದು. ಈ ಕುರಿತಂತೆ ಕಾಮಗಾರಿಗಳ ಸಂಪೂರ್ಣ ವಿವರವುಳ್ಳ ವರದಿಯನ್ನು ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.

ಈಗಾಗಲೇ ಪ್ರಗತಿಯಲ್ಲಿರುವ ಹೈಮಾಸ್ಟ್ ದೀಪಗಳ ಅಳವಡಿಕೆ ಹೊರತುಪಡಿಸಿ, ಹೊಸದಾಗಿ ಹೈಮಾಸ್ಟ್ ದೀಪಗಳ ಅಳವಡಿಕೆಯನ್ನು ಸ್ಥಗತಗೊಳಿಸಬೇಕು. ಯೋಜನೆಯಡಿ ಅನುಮತಿ ಪಡೆದು ಕಾಮಗಾರಿ ಇನ್ನೂ ಕಾಮಗಾರಿ ಆರಂಭವಾಗಿರದಿದ್ದರೆ ಅವುಗಳನ್ನು ನಿಲ್ಲಿಸಿ, ಬೇರೆ ಯೋಜನೆ ರೂಪಿಸಬೇಕು. ಡಿಎಂಎಫ್ ಅಡಿ ಪೂರ್ಣಗೊಂಡ ಕಾಮಗಾರಿಗಳಿಗೆ ಸಂಬಂಧ ಪಟ್ಟ ಇಲಾಖೆಯವರು ತಕ್ಷಣವೇ ಬಳಕೆ ಪ್ರಮಾಣ ಪತ್ರ ಸಲ್ಲಿಸುವಂತೆ ತಾಕೀತು ಮಾಡಿದರು.

ಲೋಕೋಪಯೋಗಿ, ಪಂಚಾಯತ್ ರಾಜ್ ಎಂಜಿನಿಯರಿಂಗ್, ನಿರ್ಮಿತಿ ಕೇಂದ್ರ, ಕೆಆರ್‌ಡಿಎಲ್, ಸಣ್ಣ ನೀರಾವರಿ ಸೇರಿದಂತೆ ಎಲ್ಲಾ ಇಲಾಖೆಗಳು 2020-21 ರಿಂದ 2024-25ನೇ ಸಾಲಿನವರೆಗೆ ಅನುಮೋದಿಸಲಾಗಿರುವ ಯೋಜನೆಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸಿ ಬಾಕಿ ಉಳಿದಿರುವ ಅನುದಾನವನ್ನು ಪಡೆದುಕೊಳ್ಳಬೇಕು ಸೂಚಿಸಿದರು.

ಡಿಎಂಎಫ್ ಅಡಿ ಲೋಕೋಯೋಗಿ ಇಲಾಖೆಗೆ ಒಟ್ಟು 33 ಕೋಟಿ ರು. ವೆಚ್ಚದ ಕಾಮಾಗರಿಗಳಿಗೆ ಅನುಮೋದನೆ ನೀಡಲಾಗಿದೆ. ಕಾಮಗಾರಿ ಪೂರ್ಣಗೊಂಡಿರುವ ಕುರಿತು ಸರಿಯಾದ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸುತ್ತಿರುವ ಎಂಜಿಯರ್‌ಗಳ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು. ಸಣ್ಣ ನೀರಾವರಿ ಇಲಾಖೆಯ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಕೂಡಲೇ ಬಳಕೆ ಪ್ರಮಾಣ ಪತ್ರ ನೀಡಿ, ಬಾಕಿ ಉಳಿದ 10 ಕೋಟಿ ರು. ಅನುದಾನ ಬಿಡುಗಡೆ ಅಂತಿಮ ಬಿಲ್ ಸಲ್ಲಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾಮಗಾರಿಗಳ ಅನುಷ್ಠಾನದ ಬಗ್ಗೆ ಲೆಕ್ಕಪರಿಶೋದಕ ಸಮಿತಿ ಆಕ್ಷಪಣೆ ವ್ಯಕ್ತಪಡಿದೆ. ಈ ಹಿನ್ನಲೆಯಲ್ಲಿ, ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಎನ್ ಐಸಿ, ಜಿಟಿಟಿಸಿ, ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳ ಪರಿಶೀಲನಾ ಸಮಿತಿ ರಚಿಸುವಂತೆ ಟಿ.ವೆಂಕಟೇಶ್ ಸೂಚಿಸಿದರು.

ಡಿಎಮ್ಎಫ್ ನಿಧಿ ಬಳಕೆಗೆ ಅದರದೇ ಆದ ಸ್ಪಷ್ಟ ನಿಯಮಗಳಿವೆ. ಆದರೆ ಶಿಕ್ಷಣ ಇಲಾಖೆಯಿಂದ ಶಾಲೆಗಳಲ್ಲಿ ಅಳವಡಿಸಿರುವ ಸ್ಮಾರ್ಟ್ ಕ್ಲಾಸ್, ಕಂಪೂಟರ್ ಲ್ಯಾಬ್ ಹಾಗೂ ಶಾಲೆಗಳಿಗೆ ನೀಡಿದ ವಾಹನಗಳಲ್ಲಿ ನಿಯಮಗಳ ಪಾಲನೆಯಾಗಿಲ್ಲ ಎಂದು ಲೆಕ್ಕಪರಿಶೋಧಕರ ಸಮತಿ ಆಕ್ಷೇಪಿಸಿದೆ. ಇದಕ್ಕೆ ಡಿಡಿಪಿಐ ಅವರು ಸಮಿತಿ ಮುಂದೆ ಉತ್ತರಿಸಬೇಕು. ಇದರೊಂದಿಗೆ ಲೆಕ್ಕಪರಿಶೋಧಕರಿಗೂ ಪತ್ರ ಬರೆದು ಸ್ಪಷ್ಟನೆ ನೀಡುವಂತೆ ನಿರ್ದೇಶನ ನೀಡಿದರು.

ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಮಹೇಶ್, ಜಿಪಂ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾನಾಯ್ಕ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಅಮರನಾಥ್ ಜೈನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥತರಿದ್ದರು.