ವಿದ್ಯುತ್‌ ತಂತಿ ಸ್ಪರ್ಶಿಸಿ ರಿಕ್ಷಾ ಚಾಲಕರಿಬ್ಬರ ದಾರುಣ ಸಾವು

| Published : Jun 28 2024, 12:47 AM IST

ವಿದ್ಯುತ್‌ ತಂತಿ ಸ್ಪರ್ಶಿಸಿ ರಿಕ್ಷಾ ಚಾಲಕರಿಬ್ಬರ ದಾರುಣ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಪಾಂಡೇಶ್ವರದ ರೊಸಾರಿಯೊ ಚರ್ಚ್‌ ಬಳಿ ತುಂಡಾಗಿ ಬಿದ್ದ ವಿದ್ಯುತ್‌ ತಂತಿ ತಗುಲಿ ರಿಕ್ಷಾ ಚಾಲಕರಿಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಉಳ್ಳಾಲದಲ್ಲಿ ಮನೆ ಮೇಲೆ ತಡೆಗೋಡೆ ಬಿದ್ದು ನಾಲ್ವರ ದುರ್ಮರಣದ ಬೆನ್ನಲ್ಲೇ ಮಂಗಳೂರಿನ ಪಾಂಡೇಶ್ವರದಲ್ಲಿ ಮತ್ತೆರಡು ಸಾವು ಸಂಭವಿಸಿದ್ದು, ಮಳೆ ಅನಾಹುತದ ಸಾವಿನ ಸರಣಿ ಮುಂದುವರಿದಿದೆ. ಪಾಂಡೇಶ್ವರದ ರೊಸಾರಿಯೊ ಚರ್ಚ್‌ ಬಳಿ ತುಂಡಾಗಿ ಬಿದ್ದ ವಿದ್ಯುತ್‌ ತಂತಿ ತಗುಲಿ ರಿಕ್ಷಾ ಚಾಲಕರಿಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಬುಧವಾರ ರಾತ್ರಿಯೇ ಘಟನೆ ನಡೆದಿದ್ದರೂ ಗುರುವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

ಹಾಸನದ ರಾಜು (50) ಹಾಗೂ ಪುತ್ತೂರು ರಾಮಕುಂಜದ ದೇವರಾಜ್‌ (46) ಮೃತರು. ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮೃತರ ಕುಟುಂಬದವರಿಗೆ ತಲಾ 5 ಲಕ್ಷ ರು. ಪರಿಹಾರವನ್ನು ಮೆಸ್ಕಾಂ ಘೋಷಿಸಿದೆ.

ಏನಾಯ್ತು?: ರಾಜು ಮತ್ತು ದೇವರಾಜ್‌ ಇಬ್ಬರೂ ಮಂಗಳೂರಿನಲ್ಲಿ ಬಾಡಿಗೆ ರಿಕ್ಷಾದಲ್ಲಿ ಚಾಲಕರಾಗಿ ದುಡಿಯುತ್ತಿದ್ದರು. ಇಬ್ಬರೂ ರೊಸಾರಿಯೋ ಚರ್ಚ್‌ ಬಳಿ ಬಾಡಿಗೆ ರೂಮ್‌ ಮಾಡಿ ವಾಸವಾಗಿದ್ದರು. ಬುಧವಾರ ರಾತ್ರಿ ಕೆಲಸ ಮುಗಿಸಿ ರೂಮ್‌ ಬಳಿ ರಿಕ್ಷಾ ನಿಲ್ಲಿಸಿದ ಬಳಿಕ ರಿಕ್ಷಾ ಸ್ವಚ್ಛ ಮಾಡಲೆಂದು ಬಕೆಟ್‌ನಲ್ಲಿ ನೀರು ಹಿಡಿದು ರಾಜು ಹೊರ ಬಂದರು. ಈ ವೇಳೆ ಭಾರೀ ಗಾಳಿಗೆ ಮರವೊಂದು ವಿದ್ಯುತ್‌ ತಂತಿ ಮೇಲೆ ಉರುಳಿಬಿದ್ದ ಕಾರಣ ತಂತಿ ಕಳಚಿ ಬಿದ್ದಿತ್ತು. ಇದು ರಾಜು ಅವರಿಗೆ ತಾಗಿ ವಿದ್ಯುತ್‌ ಆಘಾತಕ್ಕೆ ಒಳಗಾಗಿದ್ದಾರೆ. ಇದನ್ನು ಗಮನಿಸಿದ ದೇವರಾಜು, ರಾಜು ಅವರನ್ನು ರಕ್ಷಿಸಲು ಗೋಣಿ ಚೀಲ ಹಿಡಿದು ಪ್ರಯತ್ನಿಸಿದಾಗ ಅವರೂ ವಿದ್ಯುತ್‌ ಸ್ಪರ್ಶಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಬುಧವಾರ ರಾತ್ರಿ 9 ಗಂಟೆ ವೇಳೆಗೆ ಈ ಘಟನೆ ನಡೆದಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಗುರುವಾರ ಬೆಳಗ್ಗೆ 6 ಗಂಟೆ ವೇಳೆಗೆ ಆ ಭಾಗದಲ್ಲಿ ಬೀದಿ ದೀಪ ಆರಿಸಲು ಬಂದ ಮಹಾನಗರ ಪಾಲಿಕೆ ಸಿಬ್ಬಂದಿ ಗಮನಿಸಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ ಬಳಿಕವೇ ಬೆಳಕಿಗೆ ಬಂದಿದೆ.

ಕುಟುಂಬಗಳು ಅನಾಥ: ‘ನನ್ನ ತಮ್ಮ 25 ವರ್ಷಗಳಿಂದ ಮಂಗಳೂರಿನಲ್ಲಿ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದಾನೆ. ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದ. ನಾವು ಏಳು ಮಂದಿ ಮಕ್ಕಳು. ದೇವರಾಜು ಅವಿವಾಹಿತನಾಗಿ ಮನೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ. ಇದುವರೆಗೂ ಆತನಿಂದ ಯಾವುದೇ ರಸ್ತೆ ಅಪಘಾತ ಆಗಿಲ್ಲ. ಆದರೆ ಮೆಸ್ಕಾಂ ನಿರ್ಲಕ್ಷ್ಯದಿಂದ ಸಹೋದರನನ್ನು ಕಳೆದುಕೊಂಡಿದ್ದೇವೆ’ ಎಂದು ಮೃತ ದೇವರಾಜು ಸಹೋದರ ಆನಂದ ರಾಮಕುಂಜ ಬೇಸರ ಹೇಳಿಕೊಂಡರು.

‘ಹಾಸನದ ಅಲ್ಲೂರಿನ ರಾಜು ಕೂಡ ಕಳೆದ 35 ವರ್ಷಕ್ಕೂ ಅಧಿಕ ಸಮಯದಿಂದ ಮಂಗಳೂರಿನಲ್ಲೇ ರಿಕ್ಷಾ ಚಾಲಕರಾಗಿದ್ದರು. ಇಬ್ಬರು ಮಕ್ಕಳು ಮತ್ತು ಪತ್ನಿಗೆ ಆಧಾರವಾಗಿದ್ದರು’ ಎಂದು ಮೃತ ರಾಜು ಅವರ ಅತ್ತಿಗೆ ಶಶಿಕಲಾ ಕಣ್ಣೀರು ಹಾಕಿದರು.ಈ ರಸ್ತೇಲೆ ಅಪಾಯ ಕಟ್ಟಿಟ್ಟ ಬುತ್ತಿ: ಅಪಾಯ ಸಂಭವಿಸಿದ ರಸ್ತೆಯಲ್ಲಿ ಹಗಲಲ್ಲಿ ಶಾಲಾ ಮಕ್ಕಳು ಓಡಾಡುತ್ತಿರುತ್ತಾರೆ. ಬಹುತೇಕ ತಂತಿಗಳು ಜೋತಾಡುತ್ತಿವೆ. ಮಳೆಗಾಲಕ್ಕೆ ಮುಂಚಿತವಾಗಿ ಮುಂಜಾಗ್ರತೆ ವಹಿಸಬೇಕಾದ ಮೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ’ ಎಂದು ಸ್ಥಳೀಯರಾದ ಅಬೂಬಕರ್‌ ಸಿದ್ದೀಕ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಸ್ಥಳೀಯ ಕಾರ್ಪೊರೇಟರ್‌ ಅಬ್ದುಲ್‌ ಲತೀಫ್‌, ಪೊಲೀಸ್‌ ಅಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಮೆಸ್ಕಾಂ ನಿರ್ಲಕ್ಷ್ಯದಿಂದ ಸಾವು ಆರೋಪ

ಇಬ್ಬರು ರಿಕ್ಷಾ ಚಾಲಕರ ಸಾವಿಗೆ ಮೆಸ್ಕಾಂ ನಿರ್ಲಕ್ಷ್ಯವೇ ಪ್ರಮುಖ ಕಾರಣ. ರಿಕ್ಷಾ ಚಾಲಕರಿಗೆ ಇಎಸ್‌ಐ, ಪಿಎಫ್‌ ಏನೂ ಇಲ್ಲ. ಈ ಘಟನೆಗೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಸರ್ಕಾರ ಈ ಬಗ್ಗೆ ಗಮನ ಹರಿಸಿ ಮೃತ ರಿಕ್ಷಾ ಚಾಲಕರಿಗೆ ಸೂಕ್ತ ನ್ಯಾಯ, ಪರಿಹಾರ ಒದಗಿಸಬೇಕು’ ಎಂದು ಮಂಗಳೂರು ರಿಕ್ಷಾ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಅಶೋಕ್‌ ಶೆಟ್ಟಿ ಆಗ್ರಹಿಸಿದ್ದಾರೆ.ತಲಾ 5 ಲಕ್ಷ ರು. ಪರಿಹಾರ

‘ಕೆಲ ದಿನಗಳ ಹಿಂದಷ್ಟೇ ಘಟನೆ ನಡೆದ ಭಾಗದಲ್ಲಿ ಮೆಸ್ಕಾಂ ಸಿಬ್ಬಂದಿ ಮರಗಳ ಗೆಲ್ಲು ಕಡಿದಿದ್ದಾರೆ. ಜೋರಾದ ಗಾಳಿಗೆ ಅಲ್ಲಿದ್ದ ಮರವೊಂದು ಬಿದ್ದ ಕಾರಣ ವಿದ್ಯುತ್‌ ತಂತಿ ತುಂಡಾಗಿ ಬಿದ್ದಿದೆ. ಆ ರಸ್ತೆಯಲ್ಲಿ ರಾತ್ರಿ ಓಡಾಟ ಕಡಿಮೆ ಆದ ಕಾರಣ ರಾತ್ರಿ ನಡೆದ ಘಟನೆ ಬಗ್ಗೆ ಬೆಳಗ್ಗೆ ಮಾಹಿತಿ ದೊರಕಿದೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರು. ಪರಿಹಾರ ನೀಡಲಾಗುತ್ತದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ.ಪದ್ಮಾವತಿ ತಿಳಿಸಿದ್ದಾರೆ.