ಮಂಡಲಮರಿ ಕ್ರಾಸ್ ಮಾರ್ಗವಾಗಿ ಸಂಚರಿಸುತ್ತಿದ್ದ ಹೊಸೂರು ಗ್ರಾಮದ ಪ್ರಯಾಣಿಕರು ರಸ್ತೆ ಬದಿ ಬಿದ್ದಿದ್ದ ಅಕ್ಕಿ ಚೀಲಗಳನ್ನು ಗಮನಿಸಿದ್ದಾರೆ.

ಕೊಪ್ಪಳ: ಕೊಪ್ಪಳದಿಂದ ಕುಷ್ಟಗಿಗೆ ಸಾಗಿಸಲಾಗುತ್ತಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯ ಎರಡು ಚೀಲಗಳನ್ನು ಯಲಬುರ್ಗಾ ತಾಲೂಕಿನ ಮಂಡಲಮರಿ ಕ್ರಾಸ್ ಸಮೀಪ ರಸ್ತೆ ಬದಿ ಎಸೆದು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಬಡ ಕುಟುಂಬಗಳಿಗೆ ವಿತರಿಸಬೇಕಾದ ಅಕ್ಕಿ ಸಾಗಣೆ ವೇಳೆ ಎರಡು ಚೀಲಗಳನ್ನು ರಸ್ತೆ ಬದಿ ಬಿಸಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಕ್ಕಿ ಚೀಲಗಳನ್ನು ಯಾರು ಎಸೆದಿದ್ದಾರೆ? ಸಾಗಣೆ ವೇಳೆ ಏಕೆ ಬಿಸಾಡಲಾಗಿದೆ? ಉದ್ದೇಶಪೂರ್ವಕವಾಗಿ ಎಸೆಯಲಾಗಿದೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿವೆ.

ಮಂಡಲಮರಿ ಕ್ರಾಸ್ ಮಾರ್ಗವಾಗಿ ಸಂಚರಿಸುತ್ತಿದ್ದ ಹೊಸೂರು ಗ್ರಾಮದ ಪ್ರಯಾಣಿಕರು ರಸ್ತೆ ಬದಿ ಬಿದ್ದಿದ್ದ ಅಕ್ಕಿ ಚೀಲಗಳನ್ನು ಗಮನಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜನರು ಜಮಾಯಿಸಿ ಅಕ್ಕಿ ಚೀಲಗಳನ್ನು ವೀಕ್ಷಿಸಿದ್ದಾರೆ.

ಸರ್ಕಾರದ ಬಡವರ ಆಹಾರ ಭದ್ರತಾ ಯೋಜನೆಯ ಅಕ್ಕಿ ಸಾಗಣೆ ಮತ್ತು ವಿತರಣೆಯಲ್ಲಿ ನಿರ್ಲಕ್ಷ್ಯ ನಡೆದಿದ್ದರೆ ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಸ್ಥಳಕ್ಕೆ ಭೇಟಿ ನೀಡಿ ಅಕ್ಕಿ ಚೀಲಗಳ ಮೂಲ, ಸಾಗಣೆ ವಾಹನ ಹಾಗೂ ಸಂಬಂಧಿಸಿದವರ ಬಗ್ಗೆ ತನಿಖೆ ನಡೆಸಬೇಕು. ಅಕ್ಕಿ ಚೀಲಗಳನ್ನು ರಸ್ತೆ ಬದಿ ಎಸೆದಿರುವುದರ ಹಿಂದಿನ ಕಾರಣ ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.