ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಹಿರಿಯೂರಿನ ಇಬ್ಬರು ಟಾಪರ್‌

| Published : May 03 2025, 01:04 AM IST

ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಹಿರಿಯೂರಿನ ಇಬ್ಬರು ಟಾಪರ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಅಕಾಡೆಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮೌಲ್ಯ, ನಂದನ್‌ಗೆ 625ಕ್ಕೆ 625 ಅಂಕ

ಕನ್ನಡಪ್ರಭ ವಾರ್ತೆ ಹಿರಿಯೂರು

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ತಾಲೂಕಿನ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿ ತಾಲೂಕು ಹಾಗೂ ಜಿಲ್ಲೆಗೂ ಕೀರ್ತಿ ತಂದಿದ್ದಾರೆ.

ನಗರದ ರಾಷ್ಟ್ರೀಯ ಅಕಾಡೆಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಮೌಲ್ಯ.ಡಿ ರಾಜ್ ಹಾಗೂ ಎಚ್.ಓ.ನಂದನ್ ರಾಜ್ಯಕ್ಕೆ ಟಾಪ್ ಬಂದ ವಿದ್ಯಾರ್ಥಿಗಳು.

625ಕ್ಕೆ 625 ಅಂಕ ಪಡೆದ ಮೌಲ್ಯ ಹಾಗೂ ನಂದನ್ ರಾಜ್ಯದಲ್ಲಿ ಟಾಪರ್ ಆದ 22 ವಿದ್ಯಾರ್ಥಿಗಳಲ್ಲಿ ಇಬ್ಬರಾಗಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಟಾಪರ್ ವಿದ್ಯಾರ್ಥಿ ನಂದನ್ ಮಾತನಾಡಿ, ಮನೆಯಲ್ಲಿ ಆಕ್ಕಂದಿರಿಬ್ಬರೂ ಮೆಡಿಕಲ್ ಓದುತ್ತಿದ್ದಾರೆ. ಹಾಗಾಗಿ ನನ್ನ ಮೇಲೂ ಚನ್ನಾಗಿ ಓದುವ ಜವಾಬ್ದಾರಿ ಸಹಜವಾಗಿಯೇ ಹೆಚ್ಚು ಇತ್ತು. ಸದಾ ಓದು ಅಂತ ಹೇಳುತ್ತಿದ್ದರು. ಆದರೆ ನಾನು ದಿನಕ್ಕಿಷ್ಟು ಓದಬೇಕು ಮತ್ತು ಅದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ನಿರ್ಧರಿಸಿ ಓದುತ್ತಿದ್ದೆ. 620 ಅಂಕ ಪಡೆಯುವ ನಿರೀಕ್ಷೆ ಇತ್ತು. 625 ಬಂದಿರುವುದು ಖುಷಿ ಆಗಿದೆ. ಅಪ್ಪಾಜಿ ಪಿಗ್ಮಿ ಕಲೆಕ್ಟರ್ ಕೆಲಸ ಮಾಡುತ್ತಾರೆ. ಅಮ್ಮಗೃಹಿಣಿ, ಶಾಲಾ ಶುಲ್ಕ ಕಟ್ಟುವಲ್ಲಿ ಆಗಲಿ ನನ್ನ ಅವಶ್ಯಕತೆ ಪೂರೈಸುವಲ್ಲಿ ಆಗಲಿ ನನ್ನಪ್ಪ ಎಂದೂ ಹಿಂದೆ ಬೀಳಲಿಲ್ಲ. ಎಷ್ಟೇ ಕಷ್ಟ ಇದ್ದರೂ ಸಹ ನನ್ನ ಓದಿಗೆ ಸಹಕಾರ ನೀಡಿದರು. ಮುಖ್ಯವಾಗಿ ಓದಿದ್ದು ನೆನಪಿಟ್ಟುಕೊಳ್ಳುತ್ತಿದ್ದೆ. ಜಾಸ್ತಿ ಒತ್ತಡ ಇಟ್ಟುಕೊಂಡು ಓದಲು ಕೂರಬಾರದು. ಮುಂದೆ ಏರೋಸ್ಪೇಸ್ ಎಂಜಿನಿಯರ್ ಆಗುವ ಆಸೆ ಇದೆ ಎಂದರು.

ನಂದನ್ ಪಾಲಕರಾದ ಒಂಕಾರೇಶ್ವರ ಹಾಗೂ ಕೆಂಚಮ್ಮ ಮಾತನಾಡಿ, ಮಗನ ಸಾಧನೆ ಕಂಡು ಜೀವನ ಸಾರ್ಥಕ ಅನ್ನಿಸುತ್ತಿದೆ. 18 ವರ್ಷಗಳಿಂದ ಸ್ಥಳೀಯ ಡಿಸಿಸಿ ಬ್ಯಾoಕ್‌ನಲ್ಲಿ ಪಿಗ್ಮಿ ಕಲೆಕ್ಟರ್ ಆಗಿದ್ದೇನೆ. ನನ್ನ ದೊಡ್ಡ ಮಕ್ಕಳಿಬ್ಬರು ಮೆಡಿಕಲ್ ಓದುತ್ತಿದ್ದು ಇವನಿಗೆ ಓದು ಓದು ಅಂತ ದುಂಬಾಲು ಬೀಳುತ್ತಿದ್ದೆವು. ನಮ್ಮ ಕಷ್ಟಗಳನ್ನು ನಾವು ಮಕ್ಕಳಿಗೆ ಎಂದೂ ಹೇಳಿಕೊಳ್ಳಲಿಲ್ಲ. ನಂದನ್ ಗೆ ಜ್ಞಾಪಕ ಶಕ್ತಿ ಚನ್ನಾಗಿದೆ. ಓದಿದ್ದನ್ನು ಮನನ ಮಾಡಿಕೊಳ್ಳುತ್ತಾನೆ. ಅವನ ಶಾಲೆಯ ಶಿಕ್ಷಕರ ಶ್ರಮವೂ ಅವನ ಸಾಧನೆಯಲ್ಲಿದೆ. ಮುಂದೆ ಅವನಿಷ್ಟದ ಓದು ಓದಲಿಕ್ಕೆ ನಾವು ಬೆಂಬಲ ಕೊಡುತ್ತೇವೆ ಎಂದರು.ರಾಜ್ಯಕ್ಕೆ ಟಾಪರ್ ಬಂದ ಮತ್ತೊಬ್ಬ ವಿದ್ಯಾರ್ಥಿನಿ ಮೌಲ್ಯ.ಡಿ.ರಾಜ್ ಪೋಷಕರೊಂದಿಗೆ ತಿರುಪತಿ ಪ್ರವಾಸದಲ್ಲಿದ್ದು ದೂರವಾಣಿಯೊಂದಿಗೆ ಮಾತನಾಡಿ, ತುಂಬಾ ಖುಷಿ ಆಗುತ್ತಿದೆ. ಟಾಪರ್ ಬರುವ ನಿರೀಕ್ಷೆ ಇತ್ತು. ಅದಕ್ಕಾಗಿಯೇ ತುಂಬಾ ಶ್ರಮ ಹಾಕಿದ್ದೆ. ಶಾಲೆಯಲ್ಲಿ ಟೆಸ್ಟ್‌ಗಳು ಇರುತ್ತಿದ್ದವು. ತಪ್ಪುಗಳು ಆದಾಗ ಅಲ್ಲಲ್ಲೇ ತಿದ್ದಿ ಸರಿ ಮಾಡುತ್ತಿದ್ದರು. ಹಾಗಾಗಿ ಓದುವ ವಿಚಾರದಲ್ಲಿ ತಪ್ಪು ಮಾಡದಂತೆ ನಮ್ಮನ್ನೆಲ್ಲಾ ತಯಾರು ಮಾಡಿದರು. ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ಟ್ಯೂಷನ್ ಮಾಡುತ್ತಿದ್ದದ್ದು ಸಹ ನಮಗೆ ವರವಾಯಿತು. ವಿದ್ಯಾರ್ಥಿಗಳಲ್ಲಿ ಭಯ ಇರಬಾರದು. ಓದಿದ್ದನ್ನು ಮತ್ತೆ ಮತ್ತೆ ಪುನರಾವರ್ತನೆ ಮಾಡುತ್ತಿರಬೇಕು. ನನ್ನ ತಂದೆ ದೇವರಾಜ್ ಹಾಗೂ ತಾಯಿ ಶೋಭಾ ಇಬ್ಬರೂ ಶಿಕ್ಷಕರಾಗಿದ್ದು ಸಾಕಷ್ಟು ಬೆಂಬಲ ನೀಡಿದ್ದು ಈ ಸಾಧನೆಗೆ ಕಾರಣವಾಯಿತು ಎಂದು ಹೇಳಿದರು.