ಸಾರಾಂಶ
ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ಮೂವರು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ, ಹಣ ಕಿತ್ತುಕೊಂಡು ಪರಾರಿ ಆಗಿರುವ ಘಟನೆ ನಡೆದಿದೆ. ಪಟ್ಟಣ ಸಮೀಪದ ಅರದೋಟ್ಲು ಹಾಗೂ ಭೂಪಾಳಂ ಫ್ಯಾಕ್ಟರಿ ಏರಿಯಾದಲ್ಲಿ ಶಿಕ್ಷಕನೊಬ್ಬನ ಮೇಲೆ ದಾಳಿ ನಡೆಸಲಾಗಿದೆ.
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಸ್ಥಳೀಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿ ಮೇಲೆ ಮೂವರು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ, ₹22,000 ಕಿತ್ತುಕೊಂಡು ಪರಾರಿ ಆಗಿರುವ ಘಟನೆ ಪಟ್ಟಣ ಸಮೀಪದ ಅರದೋಟ್ಲು ಗ್ರಾಮದ ಬಳಿ ಸೋಮವಾರ ಸಂಜೆ ನಡೆದಿದೆ.ಅರದೋಟ್ಲು ಗ್ರಾಮದ ದೊರೆ ಎಂಬುವರು ಭದ್ರಾವತಿಯಿಂದ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ವಾಪಸಾಗುತ್ತಿದ್ದರು. ಈ ವೇಳೆ ಗ್ರಾಮದ ಬಳಿ ಪಲ್ಸರ್ ಬೈಕಿನಲ್ಲಿ ಮೂವರು ಯುವಕರು ಎದುರು ಬಂದು ಅಡ್ಡಗಟ್ಟಿದ್ದಾರೆ. ತಕ್ಷಣ ಒಬ್ಬ ಯುವಕ ಚಾಕು ತೋರಿಸಿ, ಬೆದರಿಸಿ ಹಣ ಹಾಗೂ ವಸ್ತುಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ತಪ್ಪಿಸಿಕೊಳ್ಳಲು ಹೋದ ಸಂದರ್ಭದಲ್ಲಿ ದೊರೆ ಅವರಿಗೆ ಚಾಕುವಿನಿಂದ ಇರಿದು, ಕೊಲೆ ಬೆದರಿಕೆ ಹಾಕಿದ್ದಾರೆ. ಅಲ್ಲದೇ, ಅವರ ಬಳಿಯಿದ್ದ ₹22,000 ಕಸಿದು ಪರಾರಿ ಆಗಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದಕ್ಕೂ ಮುನ್ನಾ ಸಿದ್ಲೀಪುರ- ಸನ್ಯಾಸಿಕೋಡಮಗ್ಗೆ ನಡುವೆ ಭೂಪಾಳಂ ಫ್ಯಾಕ್ಟರಿ ಏರಿಯಾದಲ್ಲಿ ಅರಬಿಳಚಿ ಗ್ರಾಮದ ಶಾಲೆ ಶಿಕ್ಷಕರೊಬ್ಬರು ಶಾಲೆ ಮುಗಿಸಿಕೊಂಡು ಎಂದಿನಂತೆ ತಮ್ಮ ಬನ್ನೀಕೆರೆ ಗ್ರಾಮಕ್ಕೆ ಹೋಗುತ್ತಿದ್ದರು. ಮನೆಯಿಂದ ಮೊಬೈಲ್‍ಗೆ ಕರೆ ಬಂದಿತೆಂದು ರಸ್ತೆ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಮಾತನಾಡುವಾಗ ಇದೇ ಮೂವರು ಯುವಕರು ಬೈಕ್ ನಿಲ್ಲಿಸಿ ಹೊಳಲೂರಿಗೆ ಹೋಗುವ ದಾರಿ ಕೇಳಿದ್ದಾರೆ. ಅಷ್ಟರಲ್ಲಿ ಒಬ್ಬ ಯುವಕ ಬೈಕಿನಿಂದ ಇಳಿದು ಚಾಕು ತೋರಿಸಿ ಹಣ ಕೇಳಿದ್ದಾನೆ. ಅಷ್ಟರಲ್ಲಿ ಶಿಕ್ಷಕ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದಾಗ ಇನ್ನೋರ್ವ ಯುವಕ ತನ್ನಲ್ಲಿದ್ದ ಚಾಕು ಎಸೆದಿದ್ದಾನೆ. ಇದರಿಂದ ಶಿಕ್ಷಕ ಕಿವಿ ಭಾಗದಲ್ಲಿ ಗಾಯ ಆಗಿದ್ದು, ಪಟ್ಟಣ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದಿಲ್ಲ.