ಬಾಗಲಕೋಟೆಪ್ರಸಕ್ತ ಸಾಲಿನ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಇಬ್ಬರು ಸಾಧಕಿಯರು ಭಾಜನರಾಗಿ ಜಿಲ್ಲೆಯ ಕೀರ್ತಿ ಬೆಳಗಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಸಕ್ತ ಸಾಲಿನ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಇಬ್ಬರು ಸಾಧಕಿಯರು ಭಾಜನರಾಗಿ ಜಿಲ್ಲೆಯ ಕೀರ್ತಿ ಬೆಳಗಿಸಿದ್ದಾರೆ. ಇಳಕಲ್ಲ ತಾಲೂಕಿನ ಕೋಡಿಹಾಳ ಗ್ರಾಮದ ರುಕ್ಮೀಣಿಬಾಯಿ ನಾಗಪ್ಪ ವಾಷ್ಠರ ಅವರು ಸಂಕೀರ್ಣ ಕ್ಷೇತ್ರದಲ್ಲಿ ಹಾಗೂ ಬಾಗಲಕೋಟೆ ತಾಲೂಕಿನ ಶಿರೂರ ಗ್ರಾಮದ ಗುರಮ್ಮ ಪಂಪಯ್ಯ ಸಂಕೀನಮಠ ಅವರು ಸಮಾಜ ಸೇವೆ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದಾರೆ.

ಕೌದಿ ಹೊಲೆಯುವ ಕಲೆ ಉಳಿಸಿದ ರುಕ್ಮೀಣಿಭಾಯಿ:

ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಮಹಿಳೆಯರ ಕುಲ ವೃತ್ತಿಯ ಬಣ್ಣ, ಬಣ್ಣದ ಕೌದಿ ಹೊಲಿಯುವ ಕಸೂತಿ ಕೆಲಸ ಮಾಡುವ ಕಾಯಕವನ್ನು ರುಕ್ಮಿಣಿಬಾಯಿ ನಾಗಪ್ಪ ವಾಷ್ಠರ ಅವರು ಮುಂದುವರಿಸಿಕೊಂಡು ಬಂದಿದ್ದಾರೆ.

ಇಳಕಲ್ಲ ತಾಲೂಕಿನ ಕೋಡಿಹಾಳ ಗ್ರಾಮದವರಾದ ರುಕ್ಮಿಣಿಬಾಯಿ ಅವರು ಗೋಂಧಳಿ ಬುಡಬುಡುಕಿ ಸಮುದಾಯದವರಾಗಿದ್ದಾರೆ. ಅವರ ಪತಿ ನಾಗಪ್ಪ ಅವರು ಬುಡುಬುಡುಕಿಯಾಗಿ ಭವಿಷ್ಯ ನುಡಿಯುವ ಕಾಯಕ ಮಾಡುತ್ತಿದ್ದರು. 2015ರಲ್ಲಿ ಅವರು ಮೃತಪಟ್ಟರು.

ರುಕ್ಮಿಣಿಬಾಯಿ ಅವರು ತಮ್ಮ ಬಡತನದಲ್ಲೂ ಕುಲಕಸಬು ಕಾಪಾಡಿಕೊಂಡು ಬರುತ್ತಿದ್ದು, ಬಣ್ಣ, ಬಣ್ಣದ ಕೌದಿ ಹೊಲಿಯುವ ಕೆಲಸ ಮಾಡುತ್ತಿದ್ದಾರೆ. ಓದು, ಬರಹ ಗೊತ್ತಿಲ್ಲದ ಅತ್ಯಂತ ಅಪರೂಪ ಕಾಯಕ ಜೀವಿಯನ್ನು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ತಂದೆಯ ಬುಡಬುಡಕಿ ವೃತ್ತಿಯನ್ನು ರುಕ್ಮಿಣಿ ಅವರ ಪುತ್ರ ಹಣಮಂತ ಅವರು ಮುಂದವರಿಸಿಕೊಂಡು ಬಂದಿದ್ದು, ನಾವು ಬಡ ಕುಟುಂಬದಲ್ಲಿದ್ದರೂ, ತಲೆಮಾರುಗಳಿಂದ ಬಂದಿರುವ ಕುಲಕಸಬು ಕೈಬಿಟ್ಟಿಲ್ಲ. ಇದಿದ್ದರಲ್ಲೇ ಖುಷಿಯಿದೆ. ತಾಯಿ ಅವರನ್ನು ಸರ್ಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಖುಷಿ ತಂದಿದೆ ಎಂದು ಪುತ್ರ ಹಣಮಂತ ಕನ್ನಡಪ್ರಭ ಕ್ಕೆ ತಿಳಿಸಿದ್ದಾರೆ.

ಸಮಾಜ ಸೇವೆಗೆ ಜೀವನ ಮುಡುಪಾಗಿಟ್ಟ ಗುರಮ್ಮ:

ಸಾಮಾಜಿಕ, ಸಾಂಸ್ಕೃತಿಕ ಹಾಗೂ ಜಾನಪದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗುರಮ್ಮ ಸಂಕೀನಮಠ ಅವರು ತಮ್ಮ ಜೀವನವನ್ನೇ ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದಾರೆ. 1943ರ ಫೆಬ್ರವರಿ 2ರಂದು ಶಿರೂರ ಗ್ರಾಮದಲ್ಲಿ ಪಂಪಯ್ಯ ಸಂಕೀನಮಠ ಹಾಗೂ ಬಸಮ್ಮ ದಂಪತಿಯ ಆರನೇ ಪುತ್ರಿಯಾಗಿ ಜನಿಸಿದ ಅವರು, ಬಾಲ್ಯದಲ್ಲಿಯೇ ವಿವಾಹವಾಗಿ, ಎರಡು ವರ್ಷಗಳಲ್ಲೇ ಪತಿ ಕಳೆದುಕೊಂಡು ಬಾಲ ವಿಧವೆಯಾದರು. ಜೀವನದ ಸಂಕಷ್ಟಗಳನ್ನು ಮೆಟ್ಟಿ ನಿಂತ ಗುರಮ್ಮ ಅವರು ಅಕ್ಕಮಹಾದೇವಿ ಮಂಡಳ ಸ್ಥಾಪಿಸಿ ಕಾರ್ಯದರ್ಶಿಯಾಗಿ ಹಾಗೂ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದರು.

ನೊಂದ ಮಹಿಳೆಯರಿಗೆ ವಿವಿಧ ತರಬೇತಿ ನೀಡಿ, ಅವರು ಸ್ವಾವಲಂಬಿಗಳಾಗಿ ಬದುಕಲು ನೆರವಾದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅವರು, ಕೇವಲ ನಾಲ್ಕನೇ ತರಗತಿ ಶಿಕ್ಷಣ ಪಡೆದಿದ್ದರೂ 35ನೇ ವಯಸ್ಸಿನ ನಂತರ ಸಮಾಜ ಕಲ್ಯಾಣ ಇಲಾಖೆಯ ಕಂಡನ್ಸನ್ ಕೋರ್ಸ್‌ ಮೂಲಕ ಏಳನೇ ತರಗತಿ ಶಿಕ್ಷಣ ಪೂರ್ಣಗೊಳಿಸಿದರು. ಬಳಿಕ ದಾವಣಗೆರೆಯಲ್ಲಿ ರೂರಲ್ ಬಾಲಸೇವಕ ತರಬೇತಿ ಪಡೆದು, ಶಿರೂರ ಗ್ರಾಮ ಪಂಚಾಯತಿಯಲ್ಲಿ ಶಿಶುವಿಹಾರ ಶಿಕ್ಷಕಿಯಾಗಿ ಕೇವಲ ₹50 ಸಂಬಳದಿಂದ ಸೇವೆ ಆರಂಭಿಸಿದರು. 1983 ರಿಂದ ಇಂದಿಗೂ ಪ್ರತಿ ಸೋಮವಾರ ಮೌನವ್ರತ ಆಚರಿಸುತ್ತಿರುವ ಗುರಮ್ಮ ಅವರು ಶರಣ ಸಂಸ್ಕೃತಿಯೊಂದಿಗೆ ಆಳವಾದ ನಂಟು ಹೊಂದಿದ್ದಾರೆ.

ಬಸವಣ್ಣ, ಅಕ್ಕಮಹಾದೇವಿ ಹಾಗೂ ಅಲ್ಲಮಪ್ರಭು ವಚನಗಳ ಜೊತೆಗೆ ಜಾನಪದ ಗೀಗಿ ಪದಗಳು ಮತ್ತು ಸರ್ಕಾರದ ಯೋಜನೆಗಳ ಕುರಿತು ಸ್ವರಚಿತ ಕವನಗಳನ್ನು ರಚಿಸಿ, ಸುಮಧುರ ಕಂಠದಿಂದ ಹಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಜಾನಪದ ಕಲಾವಿದೆ ಹಾಗೂ ಆಶುಕವಿಯಾಗಿ ಕರ್ನಾಟಕದ ವಿವಿಧೆಡೆ ಗುರುತಿಸಿಕೊಂಡಿದ್ದಾರೆ. ಅವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಸೇವೆ ಗುರುತಿಸಿ ಹಲವು ರಾಜ್ಯ ಮಟ್ಟದ ಹಾಗೂ ಸಂಘ-ಸಂಸ್ಥೆಗಳ ಪ್ರಶಸ್ತಿಗಳು ಸಂದಿವೆ.

ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿರುವ ಈ ಇಬ್ಬರು ಸಾಧಕಿಯರಿಗೆ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಬಾಗಲಕೋಟೆ ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ.

ಪ್ರಶಸ್ತಿ ಬಂದಿರುವುದು ಈ ವಯಸ್ಸಿನಲ್ಲಿ ಮಹಿಳೆಯರ ಪರವಾಗಿ ಇನ್ನಷ್ಟು ಕಾರ್ಯ ಮಾಡಲು ಸ್ಥೈರ್ಯ ಬಂದಿದೆ. ಮುಂದಿನ ದಿನಗಳಲ್ಲಿ ಮಹಿಳೆಯರ ಕುರಿತು ಕೆಲಸ ಕಾರ್ಯ ಮಾಡಲು ಶಕ್ತಿ ತುಂಬಿದಂತಾಗಿದೆ.

-ಗುರಮ್ಮ ಸಂಕೀನಮಠ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಶಿರೂರ