ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮೇ 29 ರಂದು ಬೆಂಗಳೂರಿನಲ್ಲಿ ‘ಎರಡು ವರ್ಷ- ಶಿಕ್ಷಣದಲ್ಲಿ ಹರ್ಷ’ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 29, 30 ರಂದು ಶೈಕ್ಷಣಿಕ ವರ್ಷದ ತರಗತಿ ಆರಂಭವಾಗಲಿದೆ. ಈ ಸಂಬಂಧ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಯಲಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಾಗುತ್ತಿದೆ. ಮೂರು ಬಾರಿ ಪರೀಕ್ಷೆ ಬರೆಯಲು ಮಕ್ಕಳಿಗೆ ಅವಕಾಶ ನೀಡಿದ್ದೇವೆ. ಇದರಿಂದಾಗಿ ಅನುತ್ತೀರ್ಣಗೊಂಡಂತಹ ಹಲವು ವಿದ್ಯಾರ್ಥಿಗಳು ಪರೀಕ್ಷೆ ಬರೆದು ತೇರ್ಗಡೆ ಹೊಂದಿ, ಅದೇ ಶೈಕ್ಷಣಿಕ ಸಾಲಿನಲ್ಲಿ ಮುಂದಿನ ತರಗತಿಗೆ ಹೋಗಲು ಅನುಕೂಲವಾಗಿದೆ ಎಂದು ಹೇಳಿದರು.ರಾಜ್ಯದಲ್ಲಿ 51 ಸಾವಿರ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಮಧು ಬಂಗಾರಪ್ಪ, ಹಿಂದಿನ ಸರ್ಕಾರಗಳು ಈ ವಿಷಯದಲ್ಲಿ ತಡವಾಗಿ ಕ್ರಮ ಕೈಗೊಳ್ಳುತ್ತಿದ್ದವು. ಏಕೆಂದರೆ ಒಂದು ತಿಂಗಳು ವಿಳಂಬವಾಗಿ ನೇಮಕ ಮಾಡಿದರೂ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ಹಣ ಉಳಿತಾಯವಾಗುತ್ತಿತ್ತು. ಆದರೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಬೊಕ್ಕಸ ಭರ್ತಿಯಾಗಿದೆ. ಹಾಗಾಗಿ 51 ಸಾವಿರ ಶಿಕ್ಷಕರ ನೇಮಕಾತಿಗೆ ಮುಂದಾಗಿದ್ದೇವೆ ಎಂದರು.
ಈ 51 ಸಾವಿರ ಶಿಕ್ಷಕರಿಗೆ ಈ ವರ್ಷದಿಂದ 2000 ರು. ಸೇರಿಸಿ ವೇತನ ನೀಡುತ್ತಿದ್ದೇವೆ. ಸಿದ್ದರಾಮಯ್ಯ ಸರ್ಕಾರದ ಖಜಾನೆ ಭರ್ತಿ ಆಗಿರುವುದರಿಂದ ಈ ಒಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.ಮೈಸೂರು ಸ್ಯಾಂಡಲ್ ಸೋಪ್ ಗೆ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾರ ಆಯ್ಕೆ ಸಂಬಂಧ ಎದ್ದಿರುವ ವಿವಾದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಾವುದೇ ವಿಷಯವಿದ್ದರೂ ಟೀಕೆ ಟಿಪ್ಪಣಿಗಳು ಇದ್ದೇ ಇರುತ್ತದೆ. ಬಹುಶಃ ಮಾರ್ಕೆಟಿಂಗ್ ತಂತ್ರಗಾರಿಕೆಯ ಭಾಗವಾಗಿ ಈ ರೀತಿ ಮಾಡಿರಬಹುದು. ಒಂದು ವೇಳೆ ತಮ್ಮನ್ನಾ ಅವರನ್ನು ವಿರೋಧಿಸುವುದಾದರೆ ಅವರ ಚಿತ್ರಗಳನ್ನು ನೋಡಬಾರದು ಅಲ್ಲವೇ ಎಂದು ಪ್ರಶ್ನಿಸಿದರು.
ಆನೆ ಕಾರಿಡರ್ ಯೋಜನೆ ಜಾರಿಗೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಈಗಾಗಲೇ ಗಮನ ಹರಿಸಿದ್ದಾರೆ. ಮಂಗನ ಕಾಟ ಹಾಗೂ ಆನೆಯ ಸಮಸ್ಯೆ ಕುರಿತು ವಿಧಾನಸಭೆಯಲ್ಲಿ ಸಾಕಷ್ಟು ಬಾರಿ ಚರ್ಚೆ ಆಗಿದೆ. ಸಮಸ್ಯೆಗೆ ಪರಿಹಾರ ದೊರಕುತ್ತದೆ ಎಂದರು.ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿಯವರು ಪ್ರತಿಭಟನೆ ಹಮ್ಮಿಕೊಂಡಿರುವ ವಿಚಾರ ಪ್ರತಿಕ್ರಿಯೆ ನೀಡಿದ ಸಚಿವರು, ಪ್ರತಿಭಟನೆ ಮಾಡಬಾರದು ಎಂಬ ರೂಲ್ಸ್ ಇದೆಯೇ ? ಬಿಜೆಪಿಯವರ ಜೊತೆ ಎಷ್ಟು ಜನ ಗೂಂಡಾಗಳಿದ್ದಾರೆ ಎಂಬ ಲಿಸ್ಟ್ ಕೊಡಬೇಕೇ? ಮಂಡ್ಯದಲ್ಲಿ ಎಷ್ಟು ಜನ ಗೂಂಡಾಗಳು ಬಿಜೆಪಿ ಸೇರ್ಪಡೆಯಾದರು? ಜೈಲಿನಲ್ಲಿ ಯಾರು ಯಾರನ್ನು ಭೇಟಿ ಮಾಡಿದರು? ಪಾರ್ಟಿಗೆ ಯಾರನ್ನ ಸೇರಿಸಿಕೊಂಡರೆಂದು ಹೇಳಬೇಕೆ ಎಂದು ಪ್ರಶ್ನಿಸಿದರು.
ಶಾಸಕ ಸಿ.ಟಿ. ರವಿ ಅವರು ಈ ವಿಷಯದಲ್ಲಿ ಬಹಳ ಚೆನ್ನಾಗಿ ಮಾತನಾಡುತ್ತಾರೆ. ಅವರಿಗೆ ಈ ದೇಶದಲ್ಲಿ ಪ್ರತಿಭಟನೆ ಮಾಡಲು ಹಕ್ಕಿದೆ. ಹಾಗಾಗಿ ಅವರು ಪ್ರತಿಭಟನೆ ಮಾಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಇನ್ನೂ ಮೂರು ವರ್ಷ ಹಾಗೂ ನಂತರದ ಐದು ವರ್ಷವೂ ಪ್ರತಿಭಟನೆ ಮಾಡುತ್ತಿರಲಿ ಎಂದು ಲೇವಡಿ ಮಾಡಿದರು.ಕಾಶ್ಮೀರದಲ್ಲಿ ಕಣ್ಣೀರು ಹಾಕಿದ ಹೆಣ್ಣು ಮಕ್ಕಳ ಹೆಸರನ್ನು ಮಾತ್ರ ಇವರು ಬಳಸಿಕೊಂಡರು. ಉಳಿದವರನ್ನು ಬೀದಿ ಪಾಲು ಮಾಡಿ ಹರಾಜು ಹಾಕಿದರು. ಈ ಹಿಂದೆ ಪುಲ್ವಾಮಾ ದಾಳಿ ಸಂದರ್ಭದಲ್ಲಿ ಹೀಗೆ ಮಾಡಿದ್ದರು. ಟೀಕೆ ಟಿಪ್ಪಣಿ ಮಾಡುವುದು ಬಹಳ ಸುಲಭ. ಆದರೆ, ಜನ ಸೇವೆ ಮಾಡುವುದು ಬಹಳ ಮುಖ್ಯ. ಬಿಜೆಪಿ ಅವರಂತೆ ಅಲ್ಲಿ ಚಲಾವೋ, ಇಲ್ಲಿ ಚಲಾವೋ, ರಿಪಬ್ಲಿಕ್ ಎಂಬ ಆಟ ನಡೆಯುವುದಿಲ್ಲ ಎಂದರು.
ಬಸ್ ಖರೀದಿ ಮಾಡಿ ಶಕ್ತಿ ಯೋಜನೆಯಡಿ ಹೆಣ್ಣು ಮಕ್ಕಳನ್ನು ಬಸ್ಸಿನಲ್ಲಿ ಕೂರಿಸಿ ಕಳಿಸುತ್ತಿದ್ದಾರೆ. ಶಾಲಾ ಮಕ್ಕಳಿಗೆ ನೀಡಲಾಗುತ್ತಿದ್ದ ಒಂದು ಮೊಟ್ಟೆಯನ್ನು ಮೂರು ಮೊಟ್ಟೆಗೆ ಹೆಚ್ಚಿಸಿದ್ದೇವೆ. ಹಾಲು ನೀಡುವುದನ್ನು ಎರಡರಿಂದ ಒಂದು ವಾರಕ್ಕೆ ಹೆಚ್ಚಿಸಿದ್ದೇವೆ. ಈ ಬಗ್ಗೆ ನಾವು ಚರ್ಚೆ ಮಾಡುವುದು ಉತ್ತಮ ಎಂದರು.