ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಯುವತಿಯರು ಸಾವು

| Published : Feb 16 2025, 01:45 AM IST

ಸಾರಾಂಶ

ಅಡುಗೆ ತಯಾರಿಯಲ್ಲಿದ್ದಾಗ ಶೋಭಾ ಮತ್ತು ನದಿಯಾ ಇಬ್ಬರೂ ಸ್ನಾನ ಮಾಡಲು ಕಾವೇರಿ ನದಿ ಬಳಿ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.

ಹಲಗೂರು: ಪ್ರವಾಸಿಗರ ಪ್ರೇಕ್ಷಣೀಯ ಸ್ಥಳ ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಹೋದ ಇಬ್ಬರು ಯುವತಿಯರು ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಗಾಣಾಳು ಗ್ರಾಮದ ಶೋಭಾ (23), ನದಿಯಾ (19) ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳು. ಮುತ್ತತ್ತಿರಾಯನಿಗೆ ಪೂಜೆ ಸಲ್ಲಿಸಲು ತಮ್ಮ ಸಂಬಂಧಿಕರು ಹಾಗೂ 50ಕ್ಕೂ ಹೆಚ್ಚು ಮಂದಿ ಶನಿವಾರ ಬೆಳಗ್ಗೆ ಮುತ್ತತ್ತಿಗೆ ಬಂದು ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ನಂತರ ಅಡುಗೆ ತಯಾರಿಯಲ್ಲಿದ್ದಾಗ ಶೋಭಾ ಮತ್ತು ನದಿಯಾ ಇಬ್ಬರೂ ಸ್ನಾನ ಮಾಡಲು ಕಾವೇರಿ ನದಿ ಬಳಿ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಮೃತ ಶೋಭಾಳಿಗೆ ಎರಡು ವರ್ಷಗಳ ಹಿಂದೆ ಮದುವೆಯಾಗಿದೆ ಎಂದು ತಿಳಿದು ಬಂದಿದೆ. ನದಿಯಾ ವಿದ್ಯಾರ್ಥಿಯಾಗಿದ್ದಾರೆ. ಇಬ್ಬರ ಮೃತರ ದೇಹಗಳನ್ನು ಹಲಗೂರು ಆಸ್ಪತ್ರೆಗೆ ತಂದಾಗ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ಮಳವಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಶವಗಳನ್ನು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಒಪ್ಪಿಸಲಾಯಿತು. ಹಲಗೂರು ಪೊಲೀಸ್ ಠಾಣೆ ಎಎಸ್ ಐ ಶಿವಣ್ಣ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.