ಸಾರಾಂಶ
- ಎಐಡಿಎಸ್‌ಒ, ಯುಬಿಡಿಟಿ ಉಳಿಸಿ ವಿದ್ಯಾರ್ಥಿಗಳ ಹೋರಾಟ ಸಮಿತಿ ಘೋಷಣೆ । ಸಹಿ ಸಂಗ್ರಹ ಅಭಿಯಾನಕ್ಕೂ ಚಾಲನೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಯುಬಿಡಿಟಿ ಕಾಲೇಜಿನ 3 ಮತ್ತು 4ನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೆಚ್ಚಿಸಲ್ಪಟ್ಟಿದ್ದ ಶುಲ್ಕವನ್ನು ಎಐಡಿಎಸ್‌ಒ ಹಾಗೂ ಯುಬಿಡಿಟಿ ಉಳಿಸಿ ವಿದ್ಯಾರ್ಥಿಗಳ ಹೋರಾಟ ಸಮಿತಿ ನೇತೃತ್ವದ ಹೋರಾಟ ಫಲವಾಗಿ ಕಡಿತಗೊಳಿಸಲಾಗಿದೆ. ಆದರೂ, ಯುಬಿಡಿಟಿ ಕಾಲೇಜಿನ ಶೇ.50 ಪೇಮೆಂಟ್ ಕೋಟಾ ರದ್ದಾಗುವವರೆಗೂ ಹೋರಾಟ ಮುಂದುವರಿಯಲಿವೆ ಎಂದು ಉಭಯ ಸಂಘಟನೆಗಳು ಎಚ್ಚರಿಸಿವೆ.
ಯುಬಿಡಿಟಿ ಕಾಲೇಜಿನ ಶುಲ್ಕ ಕಡಿತ ಉಭಯ ಸಂಘಟನೆಗಳ ನೇತೃತ್ವದ ವಿದ್ಯಾರ್ಥಿಗಳ ಹೋರಾಟದ ಫಲವಾಗಿದೆ. ಸೆ.24ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ಯುಬಿಡಿಟಿ ಉಳಿಸಿ ಪ್ರತಿಭಟನಾ ಸಮಾವೇಶದಲ್ಲಿ ಶೇ.50 ಪೇಮೆಂಟ್ ಕೋಟಾ ರದ್ದುಪಡಿಸಬೇಕು, ಶುಲ್ಕ ಹೆಚ್ಚಳ ಕೈಬಿಡುವಂತೆ ಒತ್ತಾಯಿಸಲಾಗಿತ್ತು. ಕಾಲೇಜು ಪ್ರಾಚಾರ್ಯರಿಗೆ ಮನವಿ ಸಲ್ಲಿಸಿದ್ದ ವೇಳೆ 2 ದಿನಗಳ ಕಾಲಾವಕಾಶ ಕೇಳಿದ್ದರು. ಅಂತಿಮವಾಗಿ ಶುಲ್ಕ ಕಡಿತಗೊಳಿಸಿ, ಸುತ್ತೋಲೆ ಹೊರಡಿಸಲಾಗಿದೆ. ₹33,510 ಏರಿಸಿದ್ದ ಶುಲ್ಕವನ್ನು ಅಂತಿಮ ವರ್ಷಕ್ಕೆ ₹26,720ಕ್ಕೆ ಇಳಿಸಲಾಗಿದೆ. 3ನೇ ವರ್ಷದ ಶುಲ್ಕವನ್ನು ₹34,510 ದಿಂದ ₹30,530ಕ್ಕೆ ಇಳಿಸಿದ್ದಾರೆ. ಇದು ವಿದ್ಯಾರ್ಥಿಗಳ ರಾಜಿರಹಿತ ಹೋರಾಟಕ್ಕೆ ಸಂದ ಜಯವಾಗಿದೆ ಎಂದರು.ಆದರೆ, ಯುಬಿಡಿಟಿ ಕಾಲೇಜನ್ನು ಸ್ವಹಣಕಾಸು ಸಂಸ್ಥೆಯಾಗಿಸಿ, ಕ್ರಮೇಣ ಖಾಸಗೀಕರಣಗೊಳಿಸುವ ಹುನ್ನಾರದ ಭಾಗವಾದ ಶೇ.50 ಪೇಮೆಂಟ್ ಕೋಟಾ ಇನ್ನೂ ರದ್ದಾಗಿಲ್ಲ. ಅದು ರದ್ದಾಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಸಂಘಟನೆಗಳ ಮುಖಂಡರು ಸ್ಪಷ್ಟಪಡಿಸಿದರು.
ಜಿಲ್ಲಾ ಕಾರ್ಯದರ್ಶಿ ಟಿ.ಎಸ್. ಸುಮನ್ ಮಾತನಾಡಿದರು. ಸಂಘಟನೆ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬೀಳೂರು, ಜಿಲ್ಲಾ ಉಪಾಧ್ಯಕ್ಷೆ ಬಿ.ಕಾವ್ಯ, ಹೋರಾಟ ಸಮಿತಿ ಸದಸ್ಯರಾದ ಅಭಿಷೇಕ್, ಸಂತೋಷ, ರಾಜಶೇಖರ, ಚೇತನ್, ರೀಮಾ, ಆದರ್ಶ್, ಶಿವನಗೌಡ ಇತರರು ಭಾಗವಹಿಸಿದ್ದರು.- - -
ಬಾಕ್ಸ್-1 * ಸಹಿ ಸಂಗ್ರಹಿಸುವ ಅಭಿಯಾನರಾಜ್ಯದ ಪ್ರಥಮ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಖ್ಯಾತಿಯ ದಾವಣಗೆರೆ ಯುಬಿಡಿಟಿಯಲ್ಲಿ ಶೇ.50 ಪೇಮೆಂಟ್ ಸೀಟ್ ರದ್ದುಪಡಿಸುವ ಹೋರಾಟ ಮತ್ತಷ್ಟು ತೀವ್ರಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಂಕಲ್ಪ ತೊಟ್ಟಿರುವ ಉಭಯ ಸಂಘಟನೆಗಳು ಹೋರಾಟದ ಮುಂದುವರಿಕೆಯಾಗಿ ಭಾನುವಾರ ನಗರದ ಕೆ.ಆರ್. ಮಾರುಕಟ್ಟೆ, ಗಡಿಯಾರ ಕಂಬ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಜನಸಾಮಾನ್ಯರು, ಸಣ್ಣಪುಟ್ಟ ವ್ಯಾಪಾರಸ್ಥರು, ಬೀದಿಬದಿ ವ್ಯಾಪಾರಸ್ಥರು, ರೈತರು, ಗ್ರಾಮೀಣರಿಂದ ಸಹಿ ಸಂಗ್ರಹಿಸುವ ಅಭಿಯಾನ ಕೈಗೊಂಡರು. ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ ವ್ಯಾಪಾರಸ್ಥರು, ರೈತರು, ಸಾರ್ವಜನಿಕರು ಚಳವಳಿಯನ್ನು ಬಲಪಡಿಸಲು ಸಹಿ ಜೊತೆಗೆ ಕೈಲಾದ ದೇಣಿಗೆ ನೀಡಿ, ವಿದ್ಯಾರ್ಥಿಗಳ ಹೋರಾಟಕ್ಕೆ ಶುಭ ಹಾರೈಸಿದರು.- - - ಬಾಕ್ಸ್-2 * ಹಣವಂತರಿಗೆ ಸೀಟುಗಳ ಮಾರಾಟ: ಪೂಜಾ ಆರೋಪ ಎಐಡಿಎಸ್‌ಓ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ಮಾತನಾಡಿ, ರೈತರು, ಬೀದಿಬದಿ ವ್ಯಾಪಾರಸ್ಥರು, ದಿನಗೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಜನರು ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಜನ ತತ್ತರಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಅವಲಂಬಿತರಾಗಿರುವುದು ಸರ್ಕಾರಿ ಶಾಲಾ- ಕಾಲೇಜುಗಳ ಮೇಲೆ. ಹೀಗಿರುವಾಗ ಯುಬಿಡಿಟಿ ಕಾಲೇಜಿನಲ್ಲಿ ಜಾರಿಗೊಳಿಸಿರುವ ಶೇ.50 ಪೇಮೆಂಟ್ ಕೋಟಾದ ಮೂಲಕ ಈ ಎಲ್ಲ ಜನಸಾಮಾನ್ಯರ ಮಕ್ಕಳನ್ನು ಉನ್ನತ ಶಿಕ್ಷಣದಿಂದ ದೂರ ತಳ್ಳಲಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳ ಸೀಟುಗಳನ್ನು ಹಣವಂತರಿಗೆ ಮಾರಾಟ ಮಾಡಲು ಯುಬಿಡಿಟಿ ಮುಂದಾಗಿದೆ ಎಂದು ಆರೋಪಿಸಿದರು.
- - - -29ಕೆಡಿವಿಜಿ1, 2, 3, 4:ಯುಬಿಡಿಟಿ ಕಾಲೇಜಿನಲ್ಲಿ ಶೇ.50 ಪೇಮೆಂಟ್ ಸೀಟು ಕೋಟಾ ರದ್ದುಪಡಿಸಲು ಆಗ್ರಹಿಸಿ ಎಐಡಿಎಸ್‌ಓ, ಯುಬಿಡಿಟಿ ಉಳಿಸಿ ವಿದ್ಯಾರ್ಥಿಗಳ ಹೋರಾಟ ಸಮಿತಿ ಸದಸ್ಯರು ದಾವಣಗೆರೆ ಕೆ.ಆರ್. ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ರೈತರು, ವ್ಯಾಪಾರಸ್ಥರು, ಜನಸಾಮಾನ್ಯರ ಸಹಿ ಸಂಗ್ರಹಿಸಿ, ಹೋರಾಟ ತೀವ್ರಗೊಳಿಸಿದರು.