ವೈಭವದ ಶೋಭಾಯಾತ್ರೆಯೊಂದಿಗೆ ಉಚ್ಚಿಲ ದಸರಾ ಸಂಪನ್ನ
KannadaprabhaNewsNetwork | Published : Oct 26 2023, 01:01 AM IST
ವೈಭವದ ಶೋಭಾಯಾತ್ರೆಯೊಂದಿಗೆ ಉಚ್ಚಿಲ ದಸರಾ ಸಂಪನ್ನ
ಸಾರಾಂಶ
ವಿವಿಧ ಟ್ಯಾಬ್ಲೋಗಳೊಂದಿಗೆ ಉಚ್ಚಿಲದಿಂದ ಕಾಲ್ನಡಿಗೆ ಮೂಲಕ ಹೊರಟ ಶೋಭಾಯಾತ್ರೆಯು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರ್ಮಾಳು, ಉಚ್ಚಿಲ, ಮೂಳೂರು, ಕೊಪ್ಪಲಂಗಡಿ ಮೂಲಕ 10 ಕಿ..ಮೀ. ದೂರದ ಭವ್ಯ ಮೆರವಣಿಗೆ ನಂತರ ಕಾಪು ಬೀಚ್ ನಲ್ಲಿ ಸಮುದ್ರ ಮಧ್ಯದಲ್ಲಿ ಶಾರದೆ ಮತ್ತು ನವದೇವಿಯನ್ನು ಜಲಸ್ತಂಭನಗೊಳಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಹತ್ತು ದಿನಗಳ ಕಾಲ ಜರಗಿದ ಉಚ್ಚಿಲ ದಸರಾ - 23, ಮಂಗಳವಾರ ರಾತ್ರಿ ವೈಭವೋಪೇತ ಶೋಭಾಯಾತ್ರೆ, ಕಾಪು ದೀಪಸ್ತಂಭ ಬಳಿ ಶಾರದೆಯ ವಿಸರ್ಜನೆಯೊಂದಿಗೆ ಸಂಪನ್ನಗೊಂಡಿತು. ವಿವಿಧ ಟ್ಯಾಬ್ಲೋಗಳೊಂದಿಗೆ ಉಚ್ಚಿಲದಿಂದ ಕಾಲ್ನಡಿಗೆ ಮೂಲಕ ಹೊರಟ ಶೋಭಾಯಾತ್ರೆಯು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರ್ಮಾಳು, ಉಚ್ಚಿಲ, ಮೂಳೂರು, ಕೊಪ್ಪಲಂಗಡಿ ಮೂಲಕ 10 ಕಿ..ಮೀ. ದೂರದ ಭವ್ಯ ಮೆರವಣಿಗೆ ನಂತರ ಕಾಪು ಬೀಚ್ ನಲ್ಲಿ ಸಮುದ್ರ ಮಧ್ಯದಲ್ಲಿ ಶಾರದೆ ಮತ್ತು ನವದೇವಿಯನ್ನು ಜಲಸ್ತಂಭನಗೊಳಿಸಲಾಯಿತು. ಕಾಪು ಬೀಚ್ ನಲ್ಲಿ ಕಾಶಿಯಲ್ಲಿ ಗಂಗಾನದಿ ತಟದಲ್ಲಿ ಗಂಗಾರತಿ ಬೆಳಗುವ ಪುರೋಹಿತರ ಮೂಲಕ ಬೃಹತ್ ರಥಾರತಿ ಮತ್ತು ಗಂಗಾರತಿ ಬೆಳಗಲಾಯಿತು. ಗಂಗಾರತಿಗೂ ಪೂರ್ವದಲ್ಲಿ ಸಮುದ್ರ ತೀರದಲ್ಲಿ 10 ಸಾವಿರ ಸುಮಂಗಲೆಯರಿಂದ ಸಾಮೂಹಿಕ ಮಹಾ ಮಂಗಳಾರತಿ ನೆರವೇರಿಸಲಾಯಿತು. ಸಮುದ್ರ ಮಧ್ಯದಲ್ಲಿ 50ಕ್ಕೂ ಅಧಿಕ ಮೀನುಗಾರಿಕಾ ಬೋ ಟುಗಳನ್ನು ಜೋಡಿಸಿ ಕೃತಕ ದ್ವೀಪ ಸೃಷ್ಟಿ ಮಾಡಲಾಗಿದ್ದು, ಅಲ್ಲಿ ನಡೆದ ಸುಡುಮದ್ದು ಪ್ರದರ್ಶನ ಜನಾಕರ್ಷಣೆಗೆ ಕಾರಣವಾಯಿತು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಯಶ್ಪಾಲ್ ಸುವರ್ಣ, ಉದ್ಯಮಿ ಪ್ರಕಾಶ್ ಶೆಟ್ಟಿ ಬಂಜಾರ, ಉಚ್ಚಿಲ ದಸರಾ ರೂವಾರಿ ನಾಡೋಜ ಜಿ. ಶಂಕರ್, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಅಮೀನ್, ಬೆಣ್ಣೆಕುದ್ರು ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್, ಬಗ್ವಾಡಿ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಉದಯ್ ಕುಮಾರ್ ಹಟ್ಟಿಯಂಗಡಿ, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ, ನಯನಾ ಗಣೇಶ್, ಶಿಲ್ಪಾ ಜಿ. ಸುವರ್ಣ, ಹರಿಯಪ್ಪ ಕೋಟ್ಯಾನ್, ಶ್ರೀಪತಿ ಭಟ್ ಹಾಗೂ ಇತರರು ಪಾಲ್ಗೊಂಡಿದ್ದರು.