ಉಚ್ಚಿಲ: ಇಲ್ಲಿನ ಮಹಾಲಕ್ಷ್ಮೀ ದೇವಾಲಯದಲ್ಲಿ ಕಳೆದ 10 ದಿನಗಳಿಂದ ಪೂಜೆ, ಯಾಗ, ಭಜನೆ, ನೃತ್ಯ, ಸಂಗೀತಾಧಿಗಳಿಂದ ವೈವಿಧ್ಯಮಯವಾಗಿ ಪೂಜಿಸಲ್ಪಟ್ಟ ಶ್ರೀ ಶಾರದೆ ಮತ್ತು ನವದುರ್ಗೆಯರನ್ನು ಅಭೂತಪೂರ್ವ ಶೋಭಾಯಾತ್ರೆಯಲ್ಲಿ ಕಾಪು ದೀಪಸ್ತಂಭದ ತೀರಕ್ಕೆ ಕರೆತಂದು ಕಡಲಮಾತೆಯ ಮಡಿಲಿಗೆ ಒಪ್ಪಿಸಲಾಯಿತು.ನಾಡೋಜ ಡಾ. ಜಿ. ಶಂಕರ್ ನೇತೃತ್ವದಲ್ಲಿ ದಕ ಮೊಗವೀರ ಮಹಾಜನ ಸಂಘದ ಶಿಸ್ತುಬದ್ಧ ಆಯೋಜನೆಯಲ್ಲಿ ನಡೆದ ಈ 5ನೇ ವರ್ಷದ ಉಡುಪಿ ಉಚ್ಚಿಲ ದಸರೆಯ ಕೊನೆಯ ದಿನ ಗುರುವಾರ ರಾತ್ರಿ ಶಾರದೆಯೂ ಸೇರಿದಂತೆ ದಶದೇವಿಯರನ್ನು ಉಪಸ್ಥಿತ ಹತ್ತಾರು ಸಾವಿರ ಮಂದಿ ಭಕ್ತರ ವಿಜಯಘೋಷಗಳ ನಡುವೆ ಕಾಪು ಕಡಲಲ್ಲಿ ಜಲಸ್ತಂಭನಗೊಳಿಸಲವಾಯಿತು.

ಇದಕ್ಕೆ ಮೊದಲು ದೇವಾಲಯದ ಮುಂಭಾಗದಲ್ಲಿ ಡಾ. ಜಿ. ಶಂಕರ್ ದಂಪತಿ ಕಾಪು ಶಾಸಕ ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ಶಾರದೆಗೆ ಮತ್ತು ದುರ್ಗೆಯರಿಗೆ ಕೊನೆಯ ಪುಷ್ಪಾರ್ಚನೆ ನಡೆಸಿದರು. ಅಲ್ಲಿಂದ ಇಕ್ಕೆಲಗಳಲ್ಲಿ ಹಗಲನ್ನೂ ಮೀರಿಸುವಂತಹ ವಿದ್ಯುತ್ ದೀಪಾಲಂಕೃತ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 10 ಕಿ.ಮೀ.ಗೂ ಅಧಿಕ ಶೋಭಾಯಾತ್ರೆ ನಡೆಸಲಾಯಿತು.

ಸ್ತಬ್ಧಚಿತ್ರ, ವಾದ್ಯಘೋಷ, ಭಜನೆ: ಹತ್ತಾರು ಬಗೆಯ ಸ್ತಬ್ಧಚಿತ್ರಗಳು, ವಾದ್ಯಘೋಷಗಳು, ಭಜನೆ ಸಂಕೀರ್ತನಾ ತಂಡಗಳು, ಹಾಡಿ ಕುಣಿವ ಕಲಾವಿದರು, ಜನರನ್ನು ರಂಜಿಸುತ್ತಿದ್ದ ವೇಷಧಾರಿಗಳು ಭವ್ಯ ಶೋಭಾಯಾತ್ರೆಯನ್ನು ಮತ್ತಷ್ಟು ವೈಭವಗೊಳಿಸಿದವು.

ಕಾಶಿಯಿಂದ ಬಂದಿದ್ದ ಪಂಡಿತರು ದಶದೇವಿಯರಿಗೆ ಮಾಡಿದ ಗಂಗಾರತಿ, ಸಾವಿರಕ್ಕೂ ಹೆಚ್ಚು ಸುಮಂಗಲೆಯರು ಎತ್ತಿದ ದೀಪಾರತಿಗಳು ಕಾಪು ತೀರವನ್ನು ನಕ್ಷತ್ರಲೋಕದಂತೆ ದೇದೀಪ್ಯಮಾನಗೊಳಿಸಿತ್ತು.

ಕೊನೆಗೆ ನೂರಾರು ಮಂದಿ ಶ್ವೇತ ವಸ್ತ್ರಧಾರಿ ಸ್ವಯಂಸೇವರಕರು ಶಾರದೆಗೆ ಜಯಘೋಷ ಮೊಳಗಿಸುತ್ತಾ ಆಳೆತ್ತರದ ದಶದೇವಿಯರನ್ನು ಕಡಲಮಾತೆಯ ಒಡಲಿಗೆ ಅರ್ಪಿಸಿದರು. ದಡದಲ್ಲಿ ನಿಂತಿದ್ದ ಸಹಸ್ರಾರು ಭಕ್ತಾಭಿಮಾನಿಗಳು ಕೈಮುಗಿದು ದಶದೇವಿಯರಿಗೆ ವಿದಾಯ ಹೇಳಿದರು.ನಾಡೋಜ ಡಾ. ಜಿ. ಶಂಕರ್, ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಸಚಿವ ವಿನಯಕಮಾರ್ ಸೊರಕೆ, ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉಪಾಧ್ಯಕ್ಷ ಮೋಹನ್ ಬೆಂಗ್ರೆ, ಪ್ರ.ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಜತ ಕಾರ್ಯದರ್ಶಿ ಸುಜಿತ್ ಸಾಲ್ಯಾನ್, ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಕವಿತಾ ಶರತ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಎಸ್. ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೆರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನಿಲ್ ಮುಂತಾದವರಿದ್ದರು.