ಉಡಸಲಮ್ಮದೇವಿಯ ಜಾತ್ರಾ ಮಹೋತ್ಸವ ಜ.27 ಮತ್ತು 28 ರಂದು ಅತ್ಯಂತ ಸಡಗರ ಸಂಭ್ರಮದಿಂದ ನಡೆಯಲಿದೆ.
ಮರಿಯಮ್ಮನಹಳ್ಳಿ: ಸಮೀಪದ ಬ್ಯಾಲಕುಂದಿ ಗ್ರಾಮದಲ್ಲಿ 9 ವರ್ಷಗಳ ನಂತರ ಗ್ರಾಮ ದೇವತೆ ಉಡಸಲಮ್ಮದೇವಿಯ ಜಾತ್ರಾ ಮಹೋತ್ಸವ ಜ.27 ಮತ್ತು 28 ರಂದು ಅತ್ಯಂತ ಸಡಗರ ಸಂಭ್ರಮದಿಂದ ನಡೆಯಲಿದೆ. ಜಾತ್ರೆ ಆಚರಿಸಲು ಸಕಲ ಸಿದ್ಧತೆ ನಡೆದಿದೆ.9 ವರ್ಷಗಳ ನಂತರ ನಡೆಯುತ್ತಿರುವ ಜಾತ್ರೆಯ ರಂಗು ಗ್ರಾಮದಲ್ಲಿ ಸೊಬಗು ಮತ್ತಷ್ಟು ಹೆಚ್ಚಿಸಿದೆ. ಗ್ರಾಮದಲ್ಲಿ ನಡೆಯುವ ದೇವಿಯ ಜಾತ್ರೆಯು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ.
9 ವರ್ಷಕ್ಕೊಮ್ಮೆ ನಡೆಯುವ ಈ ದೈವಿ ಸಂಸ್ಕೃತಿಯ ಜಾತ್ರೆಯ ಅಂಗವಾಗಿ 9 ದಿನಗಳ ಕಾಲ ಗ್ರಾಮದ ಎಲ್ಲ ಪ್ರವೇಶ ದ್ವಾರಗಳಿಗೆ ಮುಳ್ಳು ಬೇಲಿ ಹಾಕಿ ದಿಗ್ಭಂಧನ (ಗ್ರಾಮವನ್ನು ಬಂದ್ ಮಾಡುವುದು) ಹಾಕಲಾಗುತ್ತದೆ.ಜಾತ್ರೆಯ ಅಂಗವಾಗಿ ಊರಿನ ಗೌಡರು, ಬಾರಿಕರು (ಗಂಗಾ ಮತಸ್ಥರು), ತಳವಾರರು, ಪೂಜಾರರು, ಹರಿಜನರ ಮನೆಗಳಲ್ಲಿ 5 ಗಟ್ಟಿ ಗಡಿಗೆಗಳಲ್ಲಿ 9 ನಮೂನೆಯ ದವಸ ಧಾನ್ಯಗಳಿಂದ ಗಟ್ಟಿಗಳನ್ನು ರಾಗಿ, ಭತ್ತ, ಕಡ್ಲಿ, ಗೋದಿ, ಅವರೆ, ಉದ್ದು, ಹುರುಳಿಗಳಿಂದ ತುಂಬಿದ ಮಡಿಕೆಯನ್ನು ಜೋಳದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಗಟ್ಟಿಗಳಿಗೆ ಪ್ರತಿದಿನವೂ ನೈವೇದ್ಯೆಯೊಂದಿಗೆ ಪೂಜಾ ಕೈಂಕರ್ಯಗಳು ನೆರವೇರಿಸಲಾಗುತ್ತದೆ. ಗಟ್ಟಿಯಲ್ಲಿ ಸಸಿ ಬೆಳೆದಂತೆ ಗ್ರಾಮದೊಳಗೆ ಮತ್ತೆ 9 ವರ್ಷಗಳ ಕಾಲ ಬೆಳೆಗಳು ಹುಲುಸಾಗಿ ಬೆಳೆಯುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.ಒಂಭತ್ತನೇ ದಿನ ರಾತ್ರಿ ಗಟ್ಟಿಗಳೊಂದಿಗೆ ಗ್ರಾಮಸ್ಥರು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತರುವ ಸಂಪ್ರದಾಯ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಒಂಭತ್ತು ದಿನಗಳು ಗ್ರಾಮದ ಮುಖ್ಯ ರಸ್ತೆಯಲ್ಲಿ (ಅಗಸಿ) ಎರಡೂ ಭಾಗದಲ್ಲಿ ಇಬ್ಬರು ಕಾವಲುಗಾರರನ್ನು ನೇಮಿಸಲಾಗಿದೆ. ಹೊರಗಿನವರು, ಅವರ ವಾಹನಗಳು, ವಸ್ತುಗಳು ಗ್ರಾಮದ ಒಳಗೆ ಪ್ರವೇಶಿಸುವಂತಿಲ್ಲ, ಪ್ರವೇಶಿಸಿದರೂ ಹೊರಗೆ ಹೋಗುವಂತಿಲ್ಲ. ಇದು ತಲೆತಲಾಂತರದಿಂದ ನಡೆದು ಬಂದ ಪದ್ದತಿ.
ಪ್ರತಿ 9 ವರ್ಷಕೊಮ್ಮೆ ನಡೆಯುವ ಉಡಸಲಮ್ಮನ ಜಾತ್ರೆಯು ಈ ಹಿಂದೆ 2015 ರಲ್ಲಿ ಜಾತ್ರೆ ನಡೆದಿತ್ತು. 2024ರಲ್ಲಿ ನಡೆಯಬೇಕಿದ್ದ ಜಾತ್ರೆ ಮಳೆಗಾಲ ಸರಿಯಾಗಿ ಆಗಲಿಲ್ಲ ಎನ್ನುವ ಉದ್ದೇಶದಿಂದ ಸರಳವಾಗಿ ಆಗ ದೇವಸ್ಥಾನದಲ್ಲಿ ನಡೆಯಬೇಕಾದ ಪೂಜೆಗಳನ್ನು ನೆರವೇರಿಸಿ ಮುಂದೂಡಿದ್ದ ಜಾತ್ರೆ ಈಗ ನಡೆಯುತ್ತಿದೆ. 9 ವರ್ಷಗಳ ನಂತರ ಗ್ರಾಮದಲ್ಲಿ ನಡೆಯುತ್ತಿರುವ ಜಾತ್ರೆಗೆ ಈಗ ದೈವಿ ಕಳೆ ಬಂದಿದೆ. ಗ್ರಾಮದೊಳಗೆ ಹಲಗೆ, ಡೊಳ್ಳು, ಡ್ರಮ್ ಸೆಟ್ಟುಗಳ ಸದ್ದು ಕಳೆದ ಕೆಲ ದಿನಗಳಿಂದ ಗ್ರಾಮದಲ್ಲಿ ಮಾರ್ದನಿಸುತ್ತಿವೆ.ಗರಗ, ನಾಗಲಾಪುರ, ಗೊಲ್ಲರಹಳ್ಳಿ, ಡಣಾಯಕನಕೆರೆ, ದೇವಲಾಪುರ, ಮರಿಯಮ್ಮನ ಹಳ್ಳಿ, ಲಡಕನಬಾವಿ, ಡಣಾಪುರ, ವ್ಯಾಸನಕೆರೆ, ಅಯ್ಯನಹಳ್ಳಿ, ಹನುಮನಹಳ್ಳಿ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಜಾತ್ರೆಯಲ್ಲಿ ಭಾಗವಹಿಸುವರು. ಈಗಾಗಲೇ ಗ್ರಾಮದೇವತೆಗೆ ಗ್ರಾಮದ ನಾನಾ ಸಮಾಜದ ದೈವಸ್ಥರ ಮನೆಗಳಲ್ಲಿ ಕಳೆದ 5 ದಿನಗಳಿಂದ ವಿಶೇಷ ಪೂಜೆ ಆರಂಭಗೊಂಡಿದೆ. ಶುಕ್ರವಾರ ಬೇಲಿ ತೆರವುಗೊಳಿಸಿ ಪ್ರವೇಶ ಮುಕ್ತಗೊಳಿಸಲಾಗುತ್ತದೆ.