ಕರಾವಳಿಯಲ್ಲಿ ನಕ್ಸಲ್ ಚಟುವಟಿಕೆಗಳು ಸಂಪೂರ್ಣ ನಿಯಂತ್ರಣಗೊಂಡಿದ್ದು, ಕಳೆದ 6 ತಿಂಗಳ‍ಲ್ಲಿ ಬಂಧಿತ ಮತ್ತು ಶರಣಾಗತರಾದ ನಕ್ಸಲೀಯರ ವಿರುದ್ಧ ನ್ಯಾಯಾಂಗ ವಿಚಾರಣೆ ತ್ವರಿತವಾಗಿ ನಡೆಯುತ್ತಿವೆ.

ಉಡುಪಿ: ಉಡುಪಿ ಜಿಲ್ಲೆಯೂ ಸೇರಿದಂತೆ ಕರಾವಳಿಯಲ್ಲಿ ನಕ್ಸಲ್ ಚಟುವಟಿಕೆಗಳು ಸಂಪೂರ್ಣ ನಿಯಂತ್ರಣಗೊಂಡಿದ್ದು, ಕಳೆದ 6 ತಿಂಗಳ‍ಲ್ಲಿ ಬಂಧಿತ ಮತ್ತು ಶರಣಾಗತರಾದ ನಕ್ಸಲೀಯರ ವಿರುದ್ಧ ನ್ಯಾಯಾಂಗ ವಿಚಾರಣೆ ತ್ವರಿತವಾಗಿ ನಡೆಯುತ್ತಿವೆ.ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಒಟ್ಟು 11 ಮಂದಿ ನಕ್ಸಲೀಯರ ಮೇಲೆ 68 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 28 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ. 39 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ, 1 ಪ್ರಕರಣದಲ್ಲಿ ಸಿಐಡಿ ತನಿಖೆ ನಡೆಯುತ್ತಿದೆ.ಬಾಕಿ ಇರುವ 39 ಪ್ರಕರಣಗಳಲ್ಲಿ 1 ಪ್ರಕರಣ ದಲ್ಲಿ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಬೇಕಾಗಿದೆ, 3 ಪ್ರಕರಣಗಳಲ್ಲಿ ನ್ಯಾಯಾಲಯ ಇನ್ನೂ ಹೆಚ್ಚಿನ ದಾಖಲಾತಿಗಳನ್ನು ಕೇಳಿದ್ದು, ಅವುಗಳನ್ನು ಸಲ್ಲಿಸಲು ಬಾಕಿ ಇವೆ. ಆರೋಪಿಗಳ ವಿರುದ್ಧ ಹೆಚ್ಚುವರಿ ದಾಖಲಾತಿ ಸಲ್ಲಿಸಲು ಬಾಕಿ ಇದೆ.ಈ 11 ಮಂದಿ ನಕ್ಸಲೀಯರಲ್ಲಿ ಇಬ್ಬರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೆ, ಉಳಿದವರು ವಿವಿಧ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಳಸದ ವನಜಾಕ್ಷಿ ಯಾನೆ ಕಲ್ಪನಾ (58) ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿದ್ದು, ಅವರ ವಿರುದ್ಧ 6 ಪ್ರಕರಣಗಳಲ್ಲಿ, ಶೃಂಗೇರಿಯ ಬಿ.ಜಿ. ಕೃಷ್ಣಮೂರ್ತಿ ಯಾನೆ ವಿಜಯ್ ಯಾನೇ ಭಗತ್ (46) ಕೇರಳ ರಾಜ್ಯದ ತ್ರಿಶೂರ್ ಹೈ ಸೆಕ್ಯೂರಿಟಿ ಜೈಲಿನಲ್ಲಿದ್ದು, ಅವರ ವಿರುದ್ಧ 7 ಪ್ರಕರಣಗಳಲ್ಲಿ, ಕಳಸದ ಸಾವಿತ್ರಿ ಯಾನೆ ಉಷಾ ಯಾನೆ ರೆಜಿತಾ (35) ಕೇರಳ ರಾಜ್ಯದ ಮಹಿಳಾ ಕಾರಾಗೃಹದಲ್ಲಿದ್ದು, ಅವರ ಮೇಲೆ 2 ಪ್ರಕರಣಗಳಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಿದೆ.

ಶೃಂಗೇರಿಯ ಮುಂಡಗಾರು ಲತಾ ಯಾನೆ ಶ್ಯಾಮಲಾ ಯಾನೆ ಸ್ನೇಹ (45) ಬೆಂಗಳೂರು ಸೆಂಟ್ರಲ್ ಜೈಲ್ ನಲ್ಲಿದ್ದು, ವಿರುದ್ಧ 12 ಪ್ರಕರಣಗಳಿವೆ. ಕಳಸದ ಕನ್ಯಾಕುಮಾರಿ ಬೆಂಗಳೂರು ಸೆಂಟ್ರಲ್ ಜೈಲ್ ನಲ್ಲಿದ್ದು, 10 ಪ್ರಕರಣಗಳಲ್ಲಿ, ಮೂಡಿಗೆರೆಯ ಸುರೇಶ ಯಾನೆ ಪ್ರದೀಪ ಯಾನೆ ಮಹೇಶ (50) ಕೇರಳ ರಾಜ್ಯದ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿದ್ದು, 23 ಪ್ರಕರಣಗಳಲ್ಲಿ, ಹೊಸಗದ್ದೆ ಪ್ರಭಾ ತಮಿಳುನಾಡಿನ ವೆಲ್ಲೂರಿನ ಸಾಯಿ ಓಲ್ಡ್ ಏಜ್ ಹೋಂ ನಲ್ಲಿದ್ದು, ಆರು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ.

ಬೆಳ್ತಂಗಡಿ ಕುತ್ಲೂರಿನ ಸುಂದರಿ ಯಾನೆ ಗೀತಾ ಯಾನೆ ಬಿತ್ತು ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಅವರ ವಿರುದ್ಧ 9 ಪ್ರಕರಣಗಳ ಆರೋಪ ಇದೆ. ರಾಯಚೂರು ಜಿಲ್ಲೆಯ ಮಾನ್ವಿಯ ಮಹೇಶ ಯಾನೆ ಮಾಧವ ಯಾನೆ ಜಾನ್ (49) ಸದ್ಯ ಕೇರಳದ ತ್ರಿಶೂರ್ ಹೈ ಸೆಕ್ಯೂರಿಟಿ ಜೈಲಿನಲ್ಲಿದ್ದು, 8 ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿದ್ದಾರೆ. ಕೊಪ್ಪದ ನೀಲಗುಳಿ ಪದ್ಮನಾಭ ಜಾಮೀನು ಪಡೆದು ಬಿಡುಗಡೆಗೊಂಡಿದ್ದಾರೆ, ಅವರು 2 ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತೊಂಬಟ್ಟು ಗ್ರಾಮದ ಲಕ್ಷ್ಮಿ ಯಾನೆ ಪ್ರೇಮ (39) ಜಾಮೀನು ಪಡೆದಿದ್ದು, ಅವರ ವಿರುದ್ಧ 4 ಪ್ರಕರಣಗಳ ವಿಚಾರಣೆಯಾಗುತ್ತಿವೆ.