ಉಡುಪಿ: ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಎಬಿವಿಪಿ ಪ್ರತಿಭಟನೆ

| Published : Mar 06 2024, 02:18 AM IST

ಸಾರಾಂಶ

ಸಂದೇಶಖಾಲಿಯಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಲ್ಲಿನ ತೃಣ ಮೂಲ ಕಾಂಗ್ರೆಸ್ ಸರ್ಕಾರ ಪ್ರಾಯೋಜಿತ ಮತ್ತು ಅಧಿಕಾರ ಬೆಂಬಲಿತ ದೌರ್ಜನ್ಯ ಹಾಗೂ ಶೋಷಣೆ ವಿರುದ್ಧ ಎಬಿವಿಪಿ ಉಡುಪಿ ಘಟಕ ಪ್ರತಿಭಟನೆ ನಡೆಸಿತು. ಅಲ್ಲಿನ ಮಹಿಳೆಯರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಲ್ಲಿನ ತೃಣ ಮೂಲ ಕಾಂಗ್ರೆಸ್ ಸರ್ಕಾರ ಪ್ರಾಯೋಜಿತ ಮತ್ತು ಅಧಿಕಾರ ಬೆಂಬಲಿತ ದೌರ್ಜನ್ಯ ಹಾಗೂ ಶೋಷಣೆ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇದರ ಉಡುಪಿ ನಗರ ಘಟಕದ ವತಿಯಿಂದ ಮಂಗಳವಾರ ನಗರದ ಅಜ್ಜರಕಾಡಿನ ಹುತಾತ್ಮರ ಸ್ಮಾರಕದ ಬಳಿ ಪ್ರತಿಭಟನೆ ನಡೆಸಲಾಯಿತು.ಎಬಿವಿಪಿ ನಗರ ಕಾರ್ಯದರ್ಶಿ ಶ್ರೀವತ್ಸ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೇತೃತ್ವದ ಟಿ.ಎಂ.ಸಿ. ಸರ್ಕಾರದ ಮಹಿಳಾ ವಿರೋಧಿ ನಡೆ ಖಂಡನೀಯ. ಸ್ವತಃ ಮಹಿಳೆಯಾಗಿದ್ದು, ತನ್ನ ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಕೈಕಟ್ಟಿ ಕೂತಿರುವ ಮಮತಾ ಬ್ಯಾನರ್ಜಿ ನಡವಳಿಕೆ ಸಂದೇಹಾಸ್ಪದವಾಗಿದೆ. ಸಂದೇಶಖಾಲಿಯಲ್ಲಿ ನಡೆದ ಘಟನೆಯ ಕುರಿತು ಭಾರತದ ರಾಷ್ಟ್ರಪತಿಯವರು ಮಧ್ಯೆ ಪ್ರವೇಶಿಸಿ, ಕೇಂದ್ರ ತನಿಖಾ ತಂಡದ ಮೂಲಕ ಉನ್ನತ ಮಟ್ಟದ ಪಾರದರ್ಶಕ ತನಿಖೆ ನಡೆಸಬೇಕು ಮತ್ತು ಇಲ್ಲಿನ ಶೋಷಿತ ಮಹಿಳೆಯರಿಗೆ ನ್ಯಾಯ ಒದಗಿಸಿ ಕೊಡಬೇಕು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಜಿಹಾದಿ ಕೃತ್ಯವನ್ನು ಸ್ವಾಮೀ ವಿವೇಕಾನಂದರ, ನೇತಾಜಿ ಸುಭಾಷ್ ಚಂದ್ರ ಬೋಸರ ಬಂಗಾಳದಲ್ಲಿ ನಡೆಯದಂತೆ ತಡೆಯಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕರಾದ ಗಣೇಶ್ ಪೂಜಾರಿ, ತಾಲೂಕು ಸಂಚಾಲಕರಾದ ಅಜಿತ್ ಜೋಗಿ, ನಗರ ಸಹ ಕಾರ್ಯದರ್ಶಿ ಕಾರ್ತಿಕ್ ಮತ್ತು ಭಾವನಾ, ನಗರ ಹೋರಾಟ ಪ್ರಮುಖ್ ಭೂಷಣ್ ಮತ್ತು ಪ್ರಮುಖರಾದ ಸ್ವಸ್ತಿಕ್, ಆದಿತ್ಯ, ಸುಮುಖ್, ದರ್ಶನ್, ಲ್ಯಾರಿ, ಮನು ಮತ್ತಿತರರು ಉಪಸ್ಥಿತರಿದ್ದರು.