ಸಾರಾಂಶ
ರಾಷ್ಟ್ರ ವಿರೋಧಿ ಘೋಷಣೆ ಕೂಗಿದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಸಯ್ಯದ್ ನಾಸಿರ್ ಹುಸೇನ್ ಅನುಯಾಯಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ ನಡೆಸಿತು.
ಕನ್ನಡಪ್ರಭ ವಾರ್ತೆ ಉಡುಪಿ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಅಜ್ಜರಕಾಡು ಹುತಾತ್ಮ ಯೋಧರ ಸ್ಮಾರಕದ ಬಳಿ ರಾಷ್ಟ್ರ ವಿರೋಧಿ ಘೋಷಣೆ ಕೂಗಿದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಸಯ್ಯದ್ ನಾಸಿರ್ ಹುಸೇನ್ ಅನುಯಾಯಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿ ಪ್ರತಿಭಟನೆಯನ್ನು ನಡೆಸಲಾಯಿತು.ಈ ಸಂದರ್ಭ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಿದ್ಯಾರ್ಥಿ ಪರಿಷತ್ ತಾಲೂಕು ಸಂಚಾಲಕರಾದ ಅಜಿತ್ ಜೋಗಿ, ಪಾಪಿ ಪಾಕಿಸ್ತಾನ ಪರ ಘೋಷಣೆ ಕೂಗುವ ದೇಶ ದ್ರೋಹಿಗಳು ಭಾರತದಲ್ಲಿ ಇರಲು ಅರ್ಹತೆ ಹೊಂದಿಲ್ಲ, ಅವರು ಪಾಕಿಸ್ತಾನಕ್ಕೆ ಹೋಗಲಿ. ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ನಗರ ಕಾರ್ಯದರ್ಶಿ ಶ್ರೀವತ್ಸ ಮಾತನಾಡಿ, ದೇಶದ್ರೋಹಿ ಘೋಷಣೆ ಕೂಗಿದ ಬೆಂಬಲಿಗರನ್ನು ಪೋಷಿಸುತ್ತಿರುವ ನಾಸಿರ್ ಹುಸೇನ್ ರಾಜ್ಯಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸದಂತೆ ತಡೆಹಿಡಿಯಬೇಕು ಮತ್ತು ಅವರ ವಿರುದ್ಧವೂ ಕಾನೂನು ಕ್ರಮಗಳಾಗಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕರಾದ ಗಣೇಶ್ ಪೂಜಾರಿ, ನಗರ ಸಹಕಾರ್ಯದರ್ಶಿ ಕಾರ್ತಿಕ್ ಮತ್ತು ಭಾವನಾ, ನಗರ ವಿದ್ಯಾರ್ಥಿನಿ ಪ್ರಮುಖ್ ಸಂಹಿತಾ ಕೆ., ನಗರ ಹೋರಾಟ ಪ್ರಮುಖ್ ಭೂಷಣ್ ಮತ್ತು ಪ್ರಮುಖರಾದ ಕಿಶೋರ್, ಸುಚಿತಾ, ನವೀನ್, ಸ್ವಸ್ತಿಕ್, ಪ್ರಶ್ಮಾ, ಮನೀಶ್ ಭಾಗವಹಿಸಿದರು. ನಗರ ಸಂಪರ್ಕ ಪ್ರಮುಖ್ ರವಿಚಂದ್ರ ಹೋರಾಟ ನಿರ್ವಹಿಸಿದರು.