ಉಡುಪಿ: ಇಲ್ಲಿನ ಅಲೆವೂರು ಗ್ರಾಮದ ಪ್ರಗತಿ ನಗರದಲ್ಲಿ ಸುಮಾರು 6.50 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿದ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಣ್ಣ ನೀರಾವರಿ ಖಾತೆ ಸಚಿವ ಎನ್. ಎಸ್. ಬೋಸರಾಜು ಅವರು, ಈ ಕೇಂದ್ರವನ್ನು 5 ತಿಂಗಳಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುತ್ತದೆ ಎಂದು ಹೇಳಿದರು.5 ಎಕ್ರೆ ಜಮೀನಿನಲ್ಲಿ ಈ ವಿಜ್ಞಾನ ಕೇಂದ್ರ ನಿರ್ಮಾಣವಾಗುತ್ತಿರುವ ಉಡುಪಿ ವಿಜ್ಞಾನ ಕೇಂದ್ರದ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಉಡುಪಿ ಜಿಲ್ಲೆಯವರೇ ಆದ ಖ್ಯಾತ ವಿಜ್ಞಾನಿ ಡಾ. ಯು. ಆರ್. ರಾವ್ ಅವರ ಸ್ಮರಣಾರ್ಥ ಈ ಕೇಂದ್ರಕ್ಕೆ ಅವರ ಹೆಸರಿಡಲಾಗಿದೆ. ಇಲ್ಲಿ ಏರೋಸ್ಪೇಸ್ ಗ್ಯಾಲರಿ, ಒಶಿಯನ್ ಗ್ಯಾಲರಿ, ಫನ್ ಸೈನ್ಸ್ ಹಾಗೂ ಔಟ್ಡೋರ್ ಗ್ಯಾಲರಿಗಳು ಬರಲಿವೆ. ರಾಜ್ಯದ 12 ಜಿಲ್ಲೆಗಳಲ್ಲಿ ಈಗಾಗಲೇ ಈ ವಿಜ್ಞಾನ ಕೇಂದ್ರಗಳು ಪೂರ್ಣಗೊಂಡಿದ್ದು, ಕೋಲಾರ, ಚಿತ್ರದುರ್ಗ, ವಿಜಯನಗರ ಜಿಲ್ಲೆಗಳಲ್ಲಿ ಟೆಂಡರ್ ಆಗಿದೆ. ಶಿವಮೊಗ್ಗ, ರಾಯಚೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತಲಾ 14 ಕೋಟಿ ರು.ವೆಚ್ಚದಲ್ಲಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ ವಿಜ್ಞಾನ ಕೇಂದ್ರ ನಿರ್ಮಾಣ ಪ್ರಗತಿಯಲ್ಲಿದೆ ಎಂದರು.
ಸಣ್ಣ ನೀರಾವರಿ ಇಲಾಖೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದ 1,643 ಕೋಟಿ ರು. ಬಜೆಟ್ ಈಗ 3,400 ಕೋಟಿ ರು.ಗಳಿಗೇರಿದೆ. ಬಿಜೆಪಿ ಅವಧಿಯಲ್ಲಿ ಬಜೆಟ್ ಮೀರಿ 12,696 ಕೋಟಿ ರು.ಗಳ ವಿವಿಧ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿದ್ದು, ಅದು ಇಲಾಖೆಗೆ ಭಾರೀ ಹೊರೆಯಾಗಿದೆ. ಈ ಎಲ್ಲಾ ಕಾಮಗಾರಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.ಅಂತರ್ಜಲ ವೃದ್ಧಿಗಾಗಿ 427ಏತ ನೀರಾವರಿ ಯೋಜನೆ ಮೂಲಕ ಕೆರೆಗಳ ಭರ್ತಿ ಮಾಡಲಾಗುತ್ತಿದೆ. ಇದರಿಂದ 1,200 ರಿಂದ 1,500 ಅಡಿಗಳಿಗೆ ಇಳಿದಿದ್ದ ನೀರು ಈಗ 250 ಅಡಿಗಳಲ್ಲಿ ಲಭ್ಯವಿದೆ ಮತ್ತು 6 ಜಿಲ್ಲೆಗಳಲ್ಲಿ ಈ ರೀತಿ ಅಂತರ್ಜಲ ವೃದ್ಧಿ ಸಾಧ್ಯವಾಗಿದೆ. ಬೆಂಗಳೂರಿನ ಶುದ್ಧೀಕರಿಸಿದ ನೀರನ್ನು ಕೆರೆಗಳ ಭರ್ತಿಗೆ ಬಳಸಲಾಗುತ್ತಿದೆ ಎಂದರು.ರಾಜ್ಯದಲ್ಲಿ 37 ಲಕ್ಷ ಬೋರ್‌ವೆಲ್ ಗಳಿದ್ದು 3,000 ಕಡೆಗಳಲ್ಲಿ ಟೆಲೀ ಮೀಟರ್ ಮೂಲಕ ಅಂತರ್ಜಲ ಮಟ್ಟ ಪರಿಶೀಲಿಸಲಾಗುತ್ತಿದೆ. ಖಾಸಗಿ ಬೋರ್‌ವೆಲ್ ಗಳಿಗೆ ಪರವಾನಗಿ, ಶುಲ್ಕ ಸಹಿತ ನೀತಿನಿಯಮ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು. ಅವರೊಂದಿಗೆ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಿರ್ದೇಶಕ ಬಿ. ಸದಾಶಿವ ಪ್ರಭು, ಡಯಟ್ ಪ್ರಿನ್ಸಿಪಾಲ್ ಡಾ.ಅಶೋಕ್ ಕಾಮತ್, ಕಾಂಗ್ರೆಸ್ ಪರಮುಖರಾದ ವಿಶ್ವಾಸ್ ಅಮೀನ್ ಮುಂತಾದವರಿದ್ದರು.