ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಜಿಲ್ಲಾಡಳಿತ ಆಶ್ರಯದಲ್ಲಿ ನಡೆದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀ ಭಗೀರಥರ ಚಿತ್ರಕ್ಕೆ ಪುಷ್ಫಾರ್ಚನೆ

ಉಡುಪಿ: ರಾಜನಾಗಿ, ಋಷಿಯಾಗಿ ಭಗೀರಥರು ಸಮಾಜಕ್ಕೆ ಒಂದು ದೊಡ್ಡ ಸಂದೇಶವನ್ನು ನೀಡಿದ್ದಾರೆ. ಅವರು ತಮ್ಮ ಛಲ ಹಾಗೂ ಪರಿಶ್ರಮದ ಮೂಲಕ ಗಂಗೆಯನ್ನೇ ಧರೆಗೆ ತಂದವರು. ಭಗೀರಥರ ತಪಸ್ಸು ಹಾಗೂ ಪರಿಶ್ರಮದ ಮನೋಭಾವವನ್ನು ನಮ್ಮ ದುಡಿಮೆ ಮತ್ತು ದಿನನಿತ್ಯದ ಬದುಕಿನಲ್ಲಿ ಆಳವಡಿಸಿಕೊಳ್ಳಬೇಕು ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಹೇಳಿದರು.

ಅವರು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಜಿಲ್ಲಾಡಳಿತ ಆಶ್ರಯದಲ್ಲಿ ನಡೆದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀ ಭಗೀರಥರ ಚಿತ್ರಕ್ಕೆ ಪುಷ್ಫಾರ್ಚನೆ ಸಲ್ಲಿಸಿ ಮಾತನಾಡಿದರು. ಸಮಾಜದಲ್ಲಿರುವ ಅಸಮಾನತೆ, ಅಸ್ಪಶ್ಯತೆ ಹಾಗೂ ಮೌಢ್ಯಗಳನ್ನು ಹೋಗಲಾಡಿಸಲು ಶ್ರಮಿಸಿ ಸಮಾಜಕ್ಕೆ ಕೊಡುಗೆ ನೀಡಿದ ದಾರ್ಶನಿಕರ ಕುರಿತು ಯುವ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಸರ್ಕಾರವು ಜಯಂತಿ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬಂದಿದ್ದು, ಯುವ ಪೀಳಿಗೆಯು ಮಹನೀಯರ ತತ್ವ ಆದರ್ಶಗಳನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಂಡಾಗ ಜಯಂತಿ ಕಾರ್ಯಕ್ರಮಗಳು ಅರ್ಥಪೂರ್ಣಗೊಳ್ಳುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ನೀರಿನಿಂದ ಉಪ್ಪು ತಯಾರಿಸಿದವರು ಉಪ್ಪಾರ ಜನಾಂಗದವರಾದರು. ಹಾಗಾಗಿ ಉಪ್ಪಾರ ಜನಾಂಗಕ್ಕೂ ಭಗೀರಥ ಮಹರ್ಷಿಗೂ ಸಂಬಂಧ ಇದೆ. ಕೆಲಸದಲ್ಲಿ ಬದ್ಧತೆ ಮುಖ್ಯ ಯಾವುದೇ ಕೆಲಸದ ಬಗ್ಗೆ ಬದ್ಧತೆ ಇದ್ದಲ್ಲಿ ಮಾತ್ರವೇ ಯಶಸ್ವಿಗೊಳಿಸಲು ಸಾಧ್ಯ ಎಂದ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕ ಕೆಲಸ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಉಪತಹಸೀಲ್ದಾರ್ ನವನೀತ್, ಜಿಲ್ಲಾಡಳಿತ ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ವರ್ಷಾ ನಿರೂಪಿಸಿ, ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಕನ್ನಡ ಉಪನ್ಯಾಸಕ ರಾಮಾಂಜಿ ವಂದಿಸಿದರು.