ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಮತ್ತು ಮಾರಾಟಗಾರರ ಸಂಘವು ಅಸ್ತಿತ್ವಕ್ಕೆ ಬಂದು ಹತ್ತು ವರ್ಷಗಳು ಕಳೆಯುತ್ತಿದ್ದು, ಈ ಸಂಭ್ರಮದ ಹಿನ್ನೆಲೆಯಲ್ಲಿ, ಅತ್ಯಂತ ವೈಶಿಷ್ಟ್ಯಪೂರ್ಣವಾದ ರಾಜ್ಯ ಮಟ್ಟದ ಆಹಾರ ಮೇಳವನ್ನು ನ. 27, 28 ಮತ್ತು 29ರಂದು ಅದ್ಧೂರಿಯಾಗಿ ನಡೆಸಲು ಸಿದ್ಧತೆಗಳಾಗುತ್ತಿವೆ.

ಉಡುಪಿ: ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಮತ್ತು ಮಾರಾಟಗಾರರ ಸಂಘವು ಅಸ್ತಿತ್ವಕ್ಕೆ ಬಂದು ಹತ್ತು ವರ್ಷಗಳು ಕಳೆಯುತ್ತಿದ್ದು, ಈ ಸಂಭ್ರಮದ ಹಿನ್ನೆಲೆಯಲ್ಲಿ, ಅತ್ಯಂತ ವೈಶಿಷ್ಟ್ಯಪೂರ್ಣವಾದ ರಾಜ್ಯ ಮಟ್ಟದ ಆಹಾರ ಮೇಳವನ್ನು ನ. 27, 28 ಮತ್ತು 29ರಂದು ಅದ್ಧೂರಿಯಾಗಿ ನಡೆಸಲು ಸಿದ್ಧತೆಗಳಾಗುತ್ತಿವೆ.

2016ರಲ್ಲಿ ಸಮಾನಮನಸ್ಕ ಬೇಕರಿ ಮತ್ತು ಇತರ ಖಾದ್ಯ ವಸ್ತು ತಯಾರಕರು ಮತ್ತು ಮಾರಾಟಗಾರರು ಸೇರಿ ಈ ಸಂಘವನ್ನು ಆರಂಭಿಸಿದರು, ಆರಂಭದ ವರ್ಷದಲ್ಲಿ ಕೇವಲ 50 - 60 ಮಂದಿ ಸದಸ್ಯರಾಗಿದ್ದ ಈ ಸಂಘಟನೆ ಇಂದು 600ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಮೊದಲ ವರ್ಷ 250 ರು. ಸದಸ್ಯತ್ವ ಶುಲ್ಕವನ್ನು ನಿಗದಿ ಮಾಡಲಾಗಿತ್ತು, ಈಗ 10 ಸಾವಿರ ರು. ಶುಲ್ಕ ನೀಡಿ ಜೀವತಾವಧಿ ಸದಸ್ಯರಾಗಬಹುದಾಗಿದೆ.ಅಂದು ಬೇಕರಿ ಮಾಲಕರು ಮತ್ತು ಇತರ ಖಾದ್ಯ ವಸ್ತು ತಯಾರಕರು, ಕ್ಯಾಟರಿಂಗ್ ಉದ್ಯಮಿಗಳು ಅನುಭವಿಸುತ್ತಿದ್ದ ವಿವಿಧ ಸಮಸ್ಯೆಗಳನ್ನು ಪರಿಹರಿಸಲು, ತಮ್ಮಲ್ಲಿ ಪರಸ್ಪರ ಸಹಕಾರ ಕೊಟ್ಟುಕೊಳ್ಳಲು ಒಂದು ವೇದಿಕೆ ಬೇಕು ಎಂಬುದನ್ನು ಮನಗಂಡು ಈ ಉದ್ಯಮದಲ್ಲಿ ಹಿರಿಯರಾದ ರಾಬರ್ಟ್ ಪುರ್ಟಾಡೋ ಅವರ ನೇತೃತ್ವದಲ್ಲಿ ಈ ಸಂಘಟನೆಯನ್ನು ಹುಟ್ಟು ಹಾಕಲಾಯಿತು.ಈ ಉದ್ಯಮಕ್ಕೆ ಸ್ಥಳೀಯಾಡಳಿತ, ಆಹಾರ, ಕಂದಾಯ, ಕಾರ್ಮಿಕ ಇತ್ಯಾದಿ ಇಲಾಖೆ ಅನೇಕ ನಿಯಮಗಳ ಸರಿಯಾದ ಮಾಹಿತಿ ಇಲ್ಲದೇ ತೊಂದರೆ ಅನುಭವಿಸುವ ಪರಿಸ್ಥಿತಿ ಇತ್ತು. ಜೊತೆಗೆ ತಮ್ಮತಮ್ಮೊಳಗೆ ಅನಾರೋಗ್ಯಕರ ಸ್ಪರ್ಧೆ, ಕಾರ್ಮಿಕರ ಸಮಸ್ಯೆಯೂ ಹೆಚ್ಚಾಗುತ್ತಿತ್ತು, ಇದಕ್ಕೆಲ್ಲಾ ಪರಿಹಾರವಾಗಿ ರೂಪುಗೊಂಡದ್ದೇ ಈ ಸಂಘಟನೆ ಎನ್ನುತ್ತಾರೆ ಸಂಘದ ಅಧ್ಯಕ್ಷ ವಿಶ್ವನಾಥ ಕುಲಾಲ್‌.ಸಂಘದ ಆರಂಭದ ಶ್ರಮದ ಫಲವಾಗಿ ಇಂದು ಸಂಘ ದಶಮಾನವನ್ನು ಯಶಸ್ವಿಯಾಗಿ ಪೂರೈಸುತ್ತಿರುವುದಲ್ಲದೇ, ತನ್ನ ಸದಸ್ಯರ ನೋವುನಲಿವುಗಳಿಗೆ ಸಾಕ್ಷಿಯಾಗುತ್ತಿದೆ. ಸಂಕಷ್ಟದಲ್ಲಿದ್ದ ಈ ಉದ್ಯಮಕ್ಕೆ ಮಾರ್ಗದರ್ಶಿಯಾಗುತ್ತಿದೆ, ಈ ಉದ್ಯಮಕ್ಕೆ ಕಾಲಿಡಲು ಹೊಸ ತಲೆಮಾರನ್ನು ಆಕರ್ಷಿಸುವುದಕ್ಕೂ ಸಂಘ ಕಾರಣವಾಗಿದೆ.ಕೊವಿಡ್ ಕಾಲದಲ್ಲಂತೂ ಲಾಕ್‌ಡೌನ್‌ ನಿರ್ಬಂಧದಿಂದಾಗಿ ಬೇಕರಿ ಉದ್ಯಮವೇ ಮುಚ್ಚುತ್ತದೇನೋ ಎಂಬಷ್ಟು ಸಂಕಷ್ಟಕ್ಕೆ ಸಿಲುಕಿತ್ತು, ಸಾವಿರಾರು ಮಂದಿಗೆ ಆಹಾರವನ್ನು ಒದಗಿಸುವ ಈ ಉದ್ಯಮವೇ ತೆರೆಯದಂತಾದಾಗ ಜನರೂ ತೊಂದರೆಗೊಳಗಾದರು. ಈ ಉದ್ಯಮವನ್ನೇ ನಂಬಿಕೊಂಡಿದ್ದ ಸಾವಿರಾರು ಕುಟುಂಬಗಳೂ ತೊಂದರೆಗೊಳಗಾದವು.ಆಗ ಸಂಘಟನೆಯ ಪ್ರಮುಖರು, ಆಗಿನ ಉಡುಪಿ ಶಾಸಕ ಕೆ. ರಘುಪತಿ ಭಟ್ ಮತ್ತು ಇತರ ಶಾಸಕರ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಬೇಕರಿ ಮತ್ತು ಆಹಾರ ಉದ್ಯಮದ ಮೇಲಿನ ನಿರ್ಬಂಧವನ್ನು ತೆರೆವುಗೊಳಿಸಿದ್ದು ಸಂಘಟನೆಯ ಬಹಳ ದೊಡ್ಡ ಯಶಸ್ಸು, ಇದು ಜನರಿಗೆ ಸಂಘದ ಮೇಲೆ ವಿಶ್ವಾಸಕ್ಕೆ ಕಾರಣವಾಯಿತು.

ಆಹಾರೋದ್ಯಮಕ್ಕೆ ಬೆನ್ನೆಲುಬಾಗಿ ಸಹಕಾರಿ ಸಂಘ

ಇಂದು ಸಂಘವು ಬೇಕರಿ ಮತ್ತು ಆಹಾರೋದ್ಯಮಕ್ಕೆ ಕಾಲಿಡಲು ಆಸಕ್ತರಿಗೆ ಎಲ್ಲಾ ರೀತಿಯ ಸಹಾಯ ಮಾಡುತ್ತಿದೆ, ಇದರ ಜೊತೆಗೆ ಈ ಉದ್ಯಮವನ್ನು ಆರಂಭಿಸಲು ಬೇಕಾದ ಬಂಡ‍ವಾಳ, ಸಾಲಕ್ಕಾಗಿ ಬ್ಯಾಂಕುಗಳಿಗೆ ಅಲೆದಾಡುವುದನ್ನು ತಪ್ಪಿಸಲು 2022ರಲ್ಲಿ ತನ್ನದೇ ಆದ, ಬೇಕರಿ ಮತ್ತು ಖಾದ್ಯ ತಯಾರಕರ ಹಾಗೂ ಮಾರಾಟಗಾರರ ಸಹಕಾರಿ ಸಂಘವನ್ನು ಬ್ರಹ್ಮಾವರದಲ್ಲಿ ಆರಂಭಿಸಲಾಗಿದೆ.

16 ಮಂದಿ ನಿರ್ದೇಶಕರಿರುವ ಸಹಕಾರಿ ಸಂಘವು, ಅಧ್ಯಕ್ಷ ಶ್ರೀಧರ ಪಿ.ಎಸ್., ಉಪಾಧ್ಯಕ್ಷ ವಾಲ್ಟರ್ ಜೋಸೆಫ್ ಸಲ್ದಾನ್ಹ, ಮತ್ತು ಸಿಇಓ ಸಂಪತ್ ಕುಮಾರ್ ನೇತೃತ್ವದಲ್ಲಿ, 468 ಸದಸ್ಯರನ್ನು ಹೊಂದಿದ್ದು, 8.60 ಕೋಟಿ ರು. ಠೇವಣಿ ಸಂಗ್ರಹಿಸಿ, 6.40 ಕೋಟಿ ರು. ಸಾಲವನ್ನೂ ನೀಡಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.

ನ. 27, 28, 29 ರಾಜ್ಯ ಮಟ್ಟದ ಆಹಾರ ಮೇಳ

ಸಂಘದ ವತಿಯಿಂದ ಕರಾವಳಿ ಭಾಗದಲ್ಲಿಯೇ ಪ್ರಪ್ರಥಮವಾದ ರಾಜ್ಯ ಮಟ್ಟದ ಆಹಾರ ಮೇಳ ‘ಉಡುಪಿ ಆಹಾರ ಬಿಸಿನೆಸ್ ಎಕ್ಸ್‌ಪೋ - 2026’ ನ್ನು ಇಲ್ಲಿನ ಗಾಂಧಿ ಮೈದಾನದಲ್ಲಿ ನ.27ರಿಂದ 29ರವರೆಗೆ ಆಯೋಜಿಸಲು ಭರದ ಸಿದ್ಧತೆಗಳನ್ನು ನಡೆಸಲಾಗಿದೆ. ಈ ಮೇಳದಲ್ಲಿ ಬೇಕರಿ, ಖಾದ್ಯ, ಆಹಾರೋತ್ಪನ್ನಗಳ ಪ್ರಾತ್ಯಕ್ಷಿಕೆ ಜೊತೆಗೆ, ವಿಶೇಷವಾಗಿ ಆಹಾರೋದ್ಯಮಕ್ಕೆ ಬೇಕಾದ ದೇಶವಿದೇಶದ ಯಂತ್ರೋಪಕರಣಗಳ ದೊಡ್ಡಮಟ್ಟದ ಪ್ರದರ್ಶನ - ಮಾರಾಟ ಮಳಿಗೆಗಳಿರುತ್ತದೆ.ಉಡುಪಿ ಜಿಲ್ಲೆಯ ಪಾರಂಪರಿಕ ಆಹಾರೋತ್ಪನ್ನಗಳನ್ನು ಹೊರಜಿಲ್ಲೆಗಳಿಗೆ ಪರಿಚಯಿಸುವುದು, ಜಿಲ್ಲೆಯ ಆಹಾರೋದ್ಯಮಿಗಳಿಗೆ ಪ್ರೋತ್ಸಾಹ, ಯುವ ಜನತೆಯನ್ನು ಈ ಉದ್ಯಮಕ್ಕೆ ಆಕರ್ಷಿಸುವುದು, ಸಾಧಕರನ್ನು ಗೌರವಿಸುವುದು ಈ ಮೇಳದ ಮುಖ್ಯ ಉದ್ದೇಶವಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯಪ್ರಸಾದ್ ಶೆಣೈ ತಿಳಿಸಿದ್ದಾರೆ