ಉಡುಪಿ: ‘ಭಾರತ್‌ ಬಂದ್‌’ ಮೆರವಣಿಗೆ, ಪ್ರತಿಭಟನೆಗೆ ಸೀಮಿತ

| Published : Jul 10 2025, 12:48 AM IST

ಸಾರಾಂಶ

ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯ)ಯ ಭಾರತ್ ಬಂದ್‌ ಕರೆಯಂತೆ ಬುಧವಾರ ಉಡುಪಿಯಲ್ಲಿ ಪ್ರತಿಭಟನಾ ಮೆರವಣಿಗೆ, ಸಾರ್ವಜನಿಕ ಸಭೆಗಳನ್ನು ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಕೇಂದ್ರ ಸರ್ಕಾರವು ಕಾರ್ಮಿಕ ಕಾನೂನು ತಿದ್ದುಪಡಿಯ ಮೂಲಕ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯ)ಯ ಭಾರತ್ ಬಂದ್‌ ಕರೆಯಂತೆ ಬುಧವಾರ ಉಡುಪಿಯಲ್ಲಿ ಪ್ರತಿಭಟನಾ ಮೆರವಣಿಗೆ, ಸಾರ್ವಜನಿಕ ಸಭೆಗಳನ್ನು ನಡೆಸಲಾಯಿತು.

ಉಡುಪಿಯಲ್ಲಿ ಜೆಸಿಟಿ ನೇತೃತ್ವದಲ್ಲಿ ಭಾರೀ ಸಂಖ್ಯೆಯಲ್ಲಿ ಕಾರ್ಮಿಕರು ನಗರದ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟು ಪ್ರಧಾನ ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅಂಚೆ ಅಧಿಕ್ಷಕರ ಮೂಲಕ ಪ್ರಧಾನ ಮಂತ್ರಿಯವರಿಗೆ ಕಾರ್ಮಿಕರ ಬೇಡಿಕೆಗಳ ಮನವಿ ನೀಡಲಾಯಿತು.

ಈ ಸಭೆಯನ್ನು ಉದ್ದೇಶಿಸಿ ಪ್ರಧಾನ ಭಾಷಣ ಮಾಡಿದ ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅವರು ಕಾರ್ಮಿಕ ಕಾನೂನು ತಿದ್ದುಪಡಿಯಿಂದಾಗಿ ಕಾರ್ಮಿಕರಿಗೆ ಆಗುವ ಸಮಸ್ಯೆಗಳ, ಅನ್ಯಾಯದ ವಿರುದ್ಧ ಮಾತಾನಾಡಿದರು.

ಪ್ರತಿಭಟನೆ ಸಭೆಯಲ್ಲಿ ಎಐಟಿಯುಸಿ ಉಡುಪಿ ಜಿಲ್ಲಾ ಮುಖಂಡ ಯು.ಶಿವಾನಂದ, ಶಶಿಕಲಾ, ಐಎನ್‌ಟಿಯುಸಿ ಜಿಲ್ಲಾ ಮುಖಂಡರಾದ ಕಿರಣ್ ಹೆಗ್ಡೆ, ಆರ್‌ಎಂಎಸ್ (ಅಂಚೆ) ಸಂಘಟನೆಯ ಉಡುಪಿ ಮುಖಂಡರಾದ ದಾಮೋದರ ಭಟ್, ಎಐಬಿಇಎ ಸಂಘಟನೆಯ ಮುಖಂಡ ನಾಗೇಶ್ ನಾಯಕ್, ವಿಮಾ ನೌಕರರ ಸಂಘದ ಮುಖಂಡ ಕೆ.ವಿಶ್ವನಾಥ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಭಾರತಿ ಎಸ್, ಕಾರ್ಯದರ್ಶಿ ಸುಶೀಲಾ ನಾಡ, ಜಿಲ್ಲಾ ಕಟ್ಟಡ ಸಂಘದ ಅಧ್ಯಕ್ಷ ಶೇಖರ್ ಬಂಗೇರ, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಸಂಜೀವ ಬಳ್ಕೂರು, ಅಟೋ ಯೂನಿಯನ್ ಮುಖಂಡ ಸದಾಶಿವ ಪೂಜಾರಿ ಬ್ರಹ್ಮಾವರ, ಕಾರ್ಕಳ ತಾಲೂಕು ಸಿಐಟಿಯು ಮುಖಂಡ ಸುನೀತಾ ಶೆಟ್ಟಿ, ನಾಗೇಶ್, ನಿಟ್ಟೆ ಲೆಮಿನಾ ಯೂನಿಯನ್ ಅಧ್ಯಕ್ಷ ಮೋಹನಚಂದ್ರ, ಕಾರ್ಯದರ್ಶಿ ನಾಗೇಶ್, ಉಡುಪಿ ಬೀಡಿ ಎಂಡ್ ಟೋಬ್ಯಾಕೊ ಲೇಬರ್ ಯೂನಿಯನ್ ಅಧ್ಯಕ್ಷೆ ನಳಿನಿಎಸ್., ಕಾರ್ಯದರ್ಶಿ ಉಮೇಶ್ ಕುಂದರ್, ಸಿಐಟಿಯು ಉಡುಪಿ ವಲಯ ಮುಖಂಡರಾದ ಮೋಹನ್, ಸರೋಜ ಎಸ್., ರಂಗನಾಥ, ಸಂಜೀವ ಪೂಜಾರಿ, ಲಕ್ಷಣ ಶೆಟ್ಟಿ ಉಪಸ್ಥಿತರಿದ್ದರು.

ಜೆಸಿಟಿಯ ಜಿಲ್ಲಾ ಸಂಚಾಲಕ ಕವಿರಾಜ್ ಎಸ್.ಕಾಂಚನ್ ಸ್ವಾಗತಿಸಿದರು. ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಶಶಿಧರ ಗೊಲ್ಲ ವಂದಿಸಿದರು.

ಜಿಲ್ಲೆಯ ಕುಂದಾಪುರ ಮತ್ತು ಬೈಂದೂರುಗಳಲ್ಲಿ ಪ್ರತಿಭಟನಾ ಮೆರವಣಿಗೆ, ಸಾರ್ವಜನಿಕ ಸಭೆಗಳನ್ನು ನಡೆಸಲಾಯಿತು. ಜಿಲ್ಲೆಯಲ್ಲಿ ಬಂದ್ ಅಥವಾ ಅಹಿತಕರ ಘಟನೆಗಳು ನಡೆದಿಲ್ಲ, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.