ಉಡುಪಿ: ಶೋಭಾಗೆ ಟಿಕೆಟ್ ವಿರುದ್ಧ ಕಾರ್ಯಕರ್ತರ ಬೈಕ್ ರ್‍ಯಾಲಿ

| Published : Mar 03 2024, 01:34 AM IST / Updated: Mar 03 2024, 09:17 AM IST

ಸಾರಾಂಶ

ಮಲ್ಪೆ ಏಳೂರ ಮೊಗವೀರ ಸಮುದಾಯ ಭವನದಿಂದ ಹೊರಟ ಈ ಬೈಕ್ ರ್‍ಯಾಲಿ, ಜಿಲ್ಲಾ ಬಿಜೆಪಿ ಕಚೇರಿಗೆ ತೆರಳಿ, ಬಿಜೆಪಿ ಜಿಲ್ಲಾಧ್ಯಕ್ಷಕರಿಗೆ ಮನವಿ ಸಲ್ಲಿಸಿ, ಸ್ಥಳೀಯ ಅಭ್ಯರ್ಥಿಗೆ ಈ ಬಾರಿ ಟಿಕೆಟ್ ನೀಡಬೇಕು ಎಂದು ಆಗ್ರಹಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮತ್ತೆ ಉಡುಪಿ - ಚಿಕ್ಕಮಗಳೂರು ಕ್ಷೇತ್ರಕ್ಕೆ ಟಿಕೆಟ್ ನೀಡುವುದರ ವಿರುದ್ಧ ಮಲ್ಪೆ ಭಾಗದ ಬಿಜೆಪಿ ಕಾರ್ಯಕರ್ತರು ಶನಿವಾರ ಬೃಹತ್ ಬೈಕ್ ರ್‍ಯಾಲಿ ನಡೆಸಿದರು.

ಮಲ್ಪೆ ಏಳೂರ ಮೊಗವೀರ ಸಮುದಾಯ ಭವನದಿಂದ ಹೊರಟ ಈ ಬೈಕ್ ರ್‍ಯಾಲಿ, ಜಿಲ್ಲಾ ಬಿಜೆಪಿ ಕಚೇರಿಗೆ ತೆರಳಿ, ಬಿಜೆಪಿ ಜಿಲ್ಲಾಧ್ಯಕ್ಷಕರಿಗೆ ಮನವಿ ಸಲ್ಲಿಸಿ, ಸ್ಥಳೀಯ ಅಭ್ಯರ್ಥಿಗೆ ಈ ಬಾರಿ ಟಿಕೆಟ್ ನೀಡಬೇಕು ಎಂದು ಆಗ್ರಹಿಸಲಾಯಿತು.

ಈ ಸಂದರ್ಭ ಮಾತನಾಡಿದ ನಗರಸಭಾ ಸದಸ್ಯ, ಮೊಗವೀರ ನಾಯಕ ಯೋಗಿಶ್ ಮಲ್ಪೆ, 2014ರಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಪ್ರಥಮ ಬಾರಿಗೆ ಉಡುಪಿ-ಚಿಕ್ಕಮಗಳೂರಿನ ಟಿಕೆಟ್ ಸಿಕ್ಕಿದಾಗ ಪಕ್ಷದ ಕಾರ್ಯಕರ್ತರಾಗಿ ಅವರನ್ನು ಬೆಂಬಲಿಸಿದ್ದೆವು. 

2019ರಲ್ಲಿಯೂ ಗೆಲ್ಲಿಸಿದ್ದೆವು. ಆದರೆ ಕ್ಷೇತ್ರ ಅಭಿವೃದ್ಧಿಯನ್ನು ಅವರು ಸಂಪೂರ್ಣ ಕಡೆಗಣಿಸಿದ್ದಾರೆ. ನಮಗೆ ಮೀನುಗಾರು ದಿನನಿತ್ಯ ಓಡಾಡುವ, ಏಷ್ಯಾ ಅತೀದೊಡ್ಡ ಮೀನುಗಾರಿಕಾ ಬಂದರು ಮಲ್ಪೆ - ಉಡುಪಿ ನಡುವಿನ ಮೂರು ಮುಕ್ಕಾಲು ಕಿ.ಮೀ. ರಸ್ತೆಯ ದುರಸ್ತಿಗೆ 10 ವರ್ಷದಿಂದ ಬೇಡಿಕೆ ಸಲ್ಲಿಸಿದ್ದರೂ ಅವರು ಸ್ಪಂದಿಸಿಲ್ಲ. 

ಆದ್ದರಿಂದ ಅವರಿಗೆ ಟಿಕೆಟ್ ನೀಡುವುದಕ್ಕೆ ನಮ್ಮ ವಿರೋಧ ಇದೆ ಎಂದರು.ಕಳೆದ 3 ಬಾರಿಯೂ ಹೊರ ಜಿಲ್ಲೆಯಿಂದ ಬಂದವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಬಾರಿ ಜಿಲ್ಲೆಯ ಅಭಿವೃದ್ಧಿಗೆ ಜಿಲ್ಲೆಯ ಅಭ್ಯರ್ಥಿಗೆ ಟಿಕೆಟ್ ನೀಡಬೇಕು. 

ಸ್ಥಳೀಯರಲ್ಲಿ ಪ್ರಮೋದ್ ಮಧ್ವರಾಜ್ ಮುಂಚೂಣಿಯಲ್ಲಿದ್ದಾರೆ. ಅವರಿಗೆ ಟಿಕೆಟ್ ನೀಡುವುದಕ್ಕೆ ತಮ್ಮ ವಿರೋಧ ಇಲ್ಲ ಎಂದರು.

ಮನವಿ ಸ್ವೀಕರಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಸುದ್ದಿಗಾರರೊಂದಿಗೆ ಮಾತನಾಡಿ, ಕಾರ್ಯಕರ್ತರ ಭಿನ್ನಭಿನ್ನ ಅಭಿಪ್ರಾಯಗಳು ಸಹಜ. 

ಈಗ ನೀಡಿದ ಮನವಿಯನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುತ್ತದೆ. ಹಿರಿಯ ನಿರ್ಧಾರದಂತೆ ಕೆಲಸ ಮಾಡುತ್ತೇವೆ ಎಂದರು.