ಉಡುಪಿ: ಬಿಜೆಪಿಯ ಜಿಲ್ಲಾ ಮಟ್ಟದ ಸಾಮಾಜಿಕ ಜಾಲತಾಣ ಕಾರ್ಯಾಗಾರ

| Published : Apr 08 2024, 01:00 AM IST

ಸಾರಾಂಶ

ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಸಾಮಾಜಿಕ ಜಾಲತಾಣ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಭಾನುವಾರ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಸಾಮಾಜಿಕ ಜಾಲತಾಣ ಕಾರ್ಯಾಗಾರದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಕುಂದಾಪುರ, ಉಡುಪಿ ಜಿಲ್ಲಾ ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ರಾಜ್ಯ ಸಾಮಾಜಿಕ ಜಾಲತಾಣ ಸಂಚಾಲಕರಾದ ಪ್ರಶಾಂತ್ ಮಾಕನೂರು, ಸಹಸಂಚಾಲಕರಾದ ಪ್ರದೀಪ್ ಕದಡಿ, ರಾಜ್ಯ ಸಮಿತಿ ಸದಸ್ಯರಾದ ಅಕ್ಷಯ್ ರೈ ಹಾಗೂ ನಿಕಟಪೂರ್ವ ಸಾಮಾಜಿಕ ಜಾಲತಾಣ ಸಂಚಾಲಕರಾದ ವಿಕಾಸ್ ಪುತ್ತೂರು ಹಾಗು ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕರಾದ ಸುದೀಪ್ ನಿಟ್ಟೆ ಅವರು ಭಾಗವಹಿಸಿದ್ದರು.

ಈ ಸಂದರ್ಭ ಮಾತನಾಡಿದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಅವರು ಮೋದಿಯವರು ಮಾಡಿದಂತಹ ಸಾಧನೆಗಳನ್ನು ನಮ್ಮ ಸಾಮಾಜಿಕ ಜಾಲತಾಣ ಸದಸ್ಯರು ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭ ಮಾತನಾಡಿದ ಪ್ರಶಾಂತ್ ಮಾಕನೂರು ಅವರು ಸಾಮಾಜಿಕ ಜಾಲತಾಣದ ಸಮಿತಿಗಳನ್ನು ಈಗಿರುವ ಮಂಡಲ ಮಟ್ಟದಿಂದ ಶಕ್ತಿ ಕೇಂದ್ರ ಮತ್ತು ಬೂತ್ ಮಟ್ಟದವರೆಗೂ ವಿಸ್ತರಿಸುವ ಬಗ್ಗೆ ಮಾಡಿರುವ ನಿರ್ಧಾರದ ಬಗ್ಗೆ ತಿಳಿಸಿದರು.

ದಿನನಿತ್ಯವೂ ಸಾಮಾಜಿಕ ಜಾಲತಾಣದ ಕಾರ್ಯಕರ್ತರು ದಿನದಲ್ಲಿ ಕನಿಷ್ಠ ಆರು ಗಂಟೆಗಳ ಕಾಲ ಪ್ರಧಾನಿ ನರೇಂದ್ರ ಮೋದಿಯವರ ಗೆಲುವಿಗೆ ಶ್ರಮಿಸಲು ಕರೆ ನೀಡಿದರು. ಸಂಘಟನಾತ್ಮಕವಾಗಿ ಮಾತನಾಡಿದ ವಿಕಾಸ್ ಪುತ್ತೂರು ಅವರು ಸಂಘಟನೆ ನಡೆದು ಬಂದ ದಾರಿಯನ್ನು ವಿವರಿಸಿದರು.

ಅ ಬಳಿಕ ಮಾತನಾಡಿದ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು ಎಂಥ ವಿಚಾರಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕು ಎನ್ನುವ ಬಗ್ಗೆ ಮಾರ್ಗದರ್ಶನ ನೀಡಿ ಇನ್ನುಳಿದ ಬೆರಳೆಣಿಕೆಯ ದಿನದಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಲು ನೆರೆದಿದ್ದ ಕಾರ್ಯಕರ್ತರಿಗೆ ಕರೆ ನೀಡಿದರು.

ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕರಾದ ಸುದೀಪ್ ಶೆಟ್ಟಿ ನಿಟ್ಟೆ ಸ್ವಾಗತಿಸಿದರು. ಸಹಸಂಚಾಲಕರಾದ ನೀತಾ ಪ್ರಭು ಇವರು ನಿರೂಪಣೆಯನ್ನು ಮಾಡಿದರು.