ಸಾರಾಂಶ
ಉಡುಪಿ : ಈ ಬಾರಿಯ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಯಾರೊಬ್ಬ ಸ್ಪರ್ಧಿಗೂ ಮತ ಹಾಕಲಿಚ್ಛಿಸದ ಮತದಾರರ ಸಂಖ್ಯೆ ಹೆಚ್ಚಾಗಿದೆ. ಈ ಬಾರಿ ಒಟ್ಟು 11,269 ನೋಟಾ ಮತಗಳು ಚಲಾವಣೆಯಾಗಿವೆ.
ಇದು ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೊರತುಪಡಿಸಿ, ಇತರ 8 ಮಂದಿ ಅಭ್ಯರ್ಥಿಗಳು ಪಡೆದ ಮತಗಳಿಗಿಂತ ಹೆಚ್ಚಾಗಿದ್ದು, 3ನೇ ಸ್ಥಾನ ಪಡೆದಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಪ್ರಥಮ ಬಾರಿಗೆ ನೋಟಾ (ನನ್ ಆಫ್ ದ ಎಬೌ) ಮತ ಚಲಾವಣೆಗೆ ಚುನಾವಣಾ ಆಯೋಗ ಅವಕಾಶ ನೀಡಿತ್ತು. ಆ ವರ್ಷ ಉಡುಪಿ-ಚಿಕ್ಕಮಗಳೂರಿನಲ್ಲಿ ಒಟ್ಟು 7510 ನೋಟ ಮತಗಳು ಚಲಾವಣೆಯಾಗಿದ್ದವು. 2019ರ ಚುನಾವಣೆಯಲ್ಲಿ 7828 ನೋಟಾ ಮತದಾನವಾಗಿದ್ದವು. ಈ ಬಾರಿ ಅದು ಅನಾಪೇಕ್ಷಿತವಾಗಿ 11,269ಕ್ಕೆ ಏರಿಕೆಯಾಗಿದೆ. ಸೌಜನ್ಯಪರ ಹೋರಾಟಗಾರರು ಈ ಬಾರಿ ವ್ಯವಸ್ಥೆಯ ವಿರುದ್ಧ ನೋಟಾ ಮತಗಳ ಅಭಿಯಾನಕ್ಕೆ ಕರೆ ನೀಡಿದ್ದು, ಸ್ವಲ್ಪಮಟ್ಟಿನ ಪ್ರಭಾವ ಉಡುಪಿ ಜಿಲ್ಲೆಯಲ್ಲಿ ಬೀರಿರುವ ಸಾಧ್ಯತೆ ಇದೆ. ಜೊತೆಗೆ ನೋಟಾ ಮತದಾನದ ಬಗ್ಗೆ ಜನರಲ್ಲಿ ತಿಳುವಳಿಕೆಯೂ ಹೆಚ್ಚಿದೆ, ಆಡಳಿತ ವ್ಯವಸ್ಥೆಯ, ರಾಜಕೀಯ ಪಕ್ಷಗಳ ವಿರುದ್ಧ ಮತ್ತು ಚುನಾವಣೆಗೆ ನಿಂತಿರುವ ಅಭ್ಯರ್ಥಿ ಬಗ್ಗೆ ನಾನಾ ಕಾರಣಗಳಿಂದ ಅಸಮಾಧಾನ ಇರುವವರ ಸಂಖ್ಯೆಯೂ ಹೆಚ್ಚಾಗಿರುವುದು ಕೂಡ ನೋಟ ಮತಗಳ ಸಂಖ್ಯೆ ಹೆಚ್ಚಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.