ಉಡುಪಿ-ಚಿಕ್ಕಮಗಳೂರು: ‘ಸಿಂಪಲ್‌’ ಪೂಜಾರಿ ಎದುರು ‘ಸಜ್ಜನ’ ಹೆಗ್ಡೆ ಕಣಕ್ಕೆ

| Published : Mar 22 2024, 01:02 AM IST

ಉಡುಪಿ-ಚಿಕ್ಕಮಗಳೂರು: ‘ಸಿಂಪಲ್‌’ ಪೂಜಾರಿ ಎದುರು ‘ಸಜ್ಜನ’ ಹೆಗ್ಡೆ ಕಣಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಗುರುವಾರ ಕೆಪಿಸಿಸಿ ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಅಭ್ಯರ್ಥಿ ಸಜ್ಜನ ಜಯಪ್ರಕಾಶ್ ಹೆಗ್ಡೆ ಸ್ಪರ್ಧಿಸುವುದು ಅಧಿಕೃತವಾಗಿದೆ. ಆದ್ದರಿಂದ ಸಿಂಪಲ್‌ ಪೂಜಾರಿ ವಿರುದ್ಧ ಸಜ್ಜನ ಹೆಗ್ಡೆ ಸ್ಪರ್ಧಿಸಿದಂತಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯ ಅಭ್ಯರ್ಥಿ ಸಿಂಪಲ್ ಕೋಟ ಶ್ರೀನಿವಾಸ ಪೂಜಾರಿ ಎಂದು ಕಾಂಗ್ರೆಸ್ ನಿಂದ ಅಭ್ಯರ್ಥಿ ಸಜ್ಜನ ಜಯಪ್ರಕಾಶ್ ಹೆಗ್ಡೆ ಸ್ಪರ್ಧಿಸುವುದು ಅಧಿಕೃತವಾಗಿದೆ. ಗುರುವಾರ ಕೆಪಿಸಿಸಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಹೆಗ್ಡೆ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ.ಮೂಲತಃ ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದವರಾದ ಹೆಗ್ಡೆ ಹೈಕೋರ್ಟಿನ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿದ್ದ ದಿ. ಕೆ.ಚಂದ್ರಶೇಖರ ಹೆಗ್ಡೆ ಅವರ ಪುತ್ರ.72ರ ಹರೆಯದ ಹೆಗ್ಡೆ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದಾಗಲೇ ಉಡುಪಿ ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿತ್ತು. ಈ ಹಿಂದೆ ಕಾಂಗ್ರೆಸ್ ನಿಂದ ಅವರು ಒಂದು ಬಾರಿ ಇದೇ ಕ್ಷೇತ್ರದಿಂದ ಸಂಸದರೂ ಆಗಿದ್ದರು.1994ರಲ್ಲಿ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಜನತಾ ಪಕ್ಷದಿಂದ ವಿದಾನಸಭೆ ಪ್ರವೇಶಿಸಿದ ಹೆಗ್ಡೆ ಅದೇ ಅವಧಿಯಲ್ಲಿ ಜೆ.ಎಚ್.ಪಟೇಲರ ಸಂಪುಟದಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಉಸ್ತುವಾರಿ, ಮೀನುಗಾರಿಕಾ ಸಚಿವರೂ ಆಗಿದ್ದರು. ನಂತರ ಜನತಾ ಪಕ್ಷ ಒಡೆದ ಮೇಲೆ 1994 ಮತ್ತು 2004ರಲ್ಲಿ 2 ಬಾರಿ ಪಕ್ಷೇತರರಾಗಿ ಬ್ರಹ್ಮಾವರದಿಂದ ಆಯ್ಕೆಯಾಗಿ, ಶಾಸಕರಾಗಿ ತಮ್ಮ ಜನಪ್ರಿಯತೆಯನ್ನು ಸಾಬೀತು ಮಾಡಿದ್ದರು.1997ರಲ್ಲಿ ದ.ಕ. ಜಿಲ್ಲೆಯಿಂದ ಆಡಳಿತಾತ್ಮಕವಾಗಿ ಉಡುಪಿ ಜಿಲ್ಲೆಯಲ್ಲಿ ಪ್ರತ್ಯೇಕಗೊಳಿಸುವಲ್ಲಿ ಹೆಗ್ಡೆ ಅವರು ಪ್ರಮುಖ ಪಾತ್ರ ವಹಿಸಿದ್ದರು.1994ರಲ್ಲಿ ಕ್ಷೇತ್ರ ಪುನರ್ವಿಂಗಡಣೆಯ ಸಂದರ್ಭದಲ್ಲಿ ಬ್ರಹ್ಮಾವರ ಕ್ಷೇತ್ರ ರದ್ದಾದಾಗ, ಅವರು ಕಾಂಗ್ರೆಸ್ ಸೇರಿ ಕುಂದಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತರು.2012ರಲ್ಲಿ ಮಧ್ಯಂತರ ಚುನಾವಣೆಯಲ್ಲಿ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಪಾರ್ಲಿಮೆಂಟ್ ಪ್ರವೇಶಿಸಿದರು.ಆದರೆ, 2015ರಲ್ಲಿ ವಿಧಾನ ಪರಿಷತ್ ಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿ ಸೋತರು. ಇವರನ್ನು ಪಕ್ಷ ವಿರೋಧಿ ಚಟುವಟಿಕೆಗಾಗಿ ಕಾಂಗ್ರೆಸ್ ನಿಂದ 6 ವರ್ಷಗಳ ಕಾಲ ಅಮಾನತುಗೊಳಿಸಲಾಯಿತು.ನಂತರ 2017ರಲ್ಲಿ ಬಿಜೆಪಿ ಸೇರಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೂ ಆದರು. ಈಗ ಆಯೋಗ ಅಧಿಕಾರಾವಧಿ ಮುಗಿದಿದ್ದು, ಮತ್ತೆ ಕಾಂಗ್ರೆಸ್ ಸೇರಿ ಲೋಕಸಭಾ ಕಣಕ್ಕಿಳಿದಿದ್ದಾರೆ.ಶಾಸಕರಾಗಿ, ಸಂಸದರಾಗಿ ಸಾಕಷ್ಟು ಕೆಲಸ ಮಾಡಿರುವ, ರಾಜಕಾರಣದ ಅನುಭವವೂ ಇರುವ, ತೂಕದ ಮಾತುಗಳನ್ನಾಡುವ ಹೆಗ್ಡೆ ಅವರು ಸಜ್ಜನ ರಾಜಕಾರಣಿ ಎಂದೇ ಕರೆಸಿಕೊಂಡವರು. ಈ ಚುನಾವಣೆ ಅವರ ರಾಜಕೀಯ ಜೀವನದ ಪರೀಕ್ಷೆ ಎಂದು ವಿಶ್ಲೇಷಿಸಲಾಗುತ್ತಿದೆ.