ಉಡುಪಿ: ಸಿಎನ್‌ಜಿ ಪೂರೈಕೆ ಪುನರಾರಂಭ

| Published : May 05 2024, 02:03 AM IST

ಸಾರಾಂಶ

ಉಡುಪಿ ಜಿಲ್ಲೆಯಲ್ಲಿ ಒಟ್ಟು 8 ಸಿಎನ್‌ಜಿ ಸ್ಟೇಷನ್‌ಗಳಿದ್ದು, ಇಲ್ಲಿ ಪ್ರತಿದಿನ ಆಟೋ ಚಾಲಕರು ಇಂದನ ತುಂಬಿಸಿಕೊಳ್ಳಲು ಪ್ರತಿದಿನ 3-4 ಗಂಟೆ ಕಾಲ ಸರದಿಯಲ್ಲಿ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ಒಂದೆಡೆ ಸಾಕಷ್ಟು ಇಂಧನ ಇಲ್ಲ, ಇನ್ನೊಂದೆಡೆ ಸರದಿಯಲ್ಲಿ ಕಾಯುವುದರಿಂದ ಬಾಡಿಗೆಯೂ ಇಲ್ಲದೇ ಆಟೋ ಚಾಲಕರು ಸಂಕಷ್ಟಕ್ಕೊಳಗಾಗಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ಕಳೆದ ಎರಡು ವಾರಗಳಿಂದ ಉಡುಪಿ ಜಿಲ್ಲೆಯಲ್ಲಿ ಉಂಟಾಗಿದ್ದ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್‌ಜಿ) ಅಭಾವ ಸಮಸ್ಯೆ ಪರಿಹಾರವಾಗಿದೆ. ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರ ಮಧ್ಯಪ್ರವೇಶದಿಂದ ಮತ್ತೆ ಸಿಎನ್‌ಜಿ ಪೂರೈಕೆ ಸುಗಮಗೊಂಡಿದೆ.

ಉಡುಪಿ ಜಿಲ್ಲೆಗೆ ಅದಾನಿ ಸಂಸ್ಥೆ ಮತ್ತು ದ.ಕ. ಜಿಲ್ಲೆಗೆ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ (ಗೇಲ್) ಸಿಎನ್‌ಜಿ ಪೂರೈಕೆಗೆ ಗುತ್ತಿಗೆ ಪಡೆದಿವೆ. ಗೇಲ್ ಕಂಪನಿಗೆ ಮಂಗಳೂರಿನಲ್ಲಿ ಎರಡು ಸಿಎನ್‌ಜಿ ದಾಸ್ತಾನು ಘಟಕಗಳಿವೆ. ಆದರೆ ಅದಾನಿ ಕಂಪನಿಗೆ ಯಾವುದೇ ದಾಸ್ತಾನು ಘಟಕಗಳಿಲ್ಲ. ಆದ್ದರಿಂದ ಅದಾನಿ ಕಂಪನಿ, ಗೇಲ್‌ನಿಂದ ಸಿಎನ್‌ಜಿ ಪಡೆದು ಉಡುಪಿಗೆ ಪೂರೈಕೆ ಮಾಡುತ್ತಿತ್ತು. ಎರಡು ವಾರಗಳ ಹಿಂದೆ ಗೇಲ್ ಕಂಪನಿಯ ಒಂದು ಘಟಕದ ತಾಂತ್ರಿಕ ಸಮಸ್ಯೆ ಉಂಟಾಗಿ ಅದನ್ನು ಮುಚ್ಚಲಾಗಿದೆ. ಇದರಿಂದ ಅದಾನಿ ಕಂಪನಿಗೆ ಸಿಎನ್‌ಜಿ ಸಿಗದೇ ಉಡುಪಿ ಜಿಲ್ಲೆಗೆ ಪೂರೈಕೆ ಕೊರತೆಯಾಗಿತ್ತು. ಇದರಿಂದ ಜಿಲ್ಲೆಯ 5000ಕ್ಕೂ ಅಧಿಕ ಸಿಎನ್‌ಜಿ ಆಧಾರಿತ ಆಟೋಗಳು ಮತ್ತು ಇತರ ವಾಹನಗಳು ತೀವ್ರ ತೊಂದರೆ ಅನುಭವಿಸಿದ್ದವು. ದ.ಕ. ಜಿಲ್ಲೆಯಲ್ಲಿಯೂ ಇಂಧನ ಕೊರತೆಯಿಂದ ಸಮಸ್ಯೆಯಾಗಿತ್ತು.

ಉಡುಪಿ ಜಿಲ್ಲೆಯಲ್ಲಿ ಒಟ್ಟು 8 ಸಿಎನ್‌ಜಿ ಸ್ಟೇಷನ್‌ಗಳಿದ್ದು, ಇಲ್ಲಿ ಪ್ರತಿದಿನ ಆಟೋ ಚಾಲಕರು ಇಂದನ ತುಂಬಿಸಿಕೊಳ್ಳಲು ಪ್ರತಿದಿನ 3-4 ಗಂಟೆ ಕಾಲ ಸರದಿಯಲ್ಲಿ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ಒಂದೆಡೆ ಸಾಕಷ್ಟು ಇಂಧನ ಇಲ್ಲ, ಇನ್ನೊಂದೆಡೆ ಸರದಿಯಲ್ಲಿ ಕಾಯುವುದರಿಂದ ಬಾಡಿಗೆಯೂ ಇಲ್ಲದೇ ಆಟೋ ಚಾಲಕರು ಸಂಕಷ್ಟಕ್ಕೊಳಗಾಗಿದ್ದರು.

ಈ ಬಗ್ಗೆ ಆಟೋ ಚಾಲಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ, ಶುಕ್ರವಾರ ಎಸ್ಪಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅದಾನಿ ಸಂಸ್ಥೆಯ ಪ್ರತಿನಿಧಿಗಳಿಗೆ ತಕ್ಷಣ ಸಮಸ್ಯೆ ಬಗಹರಿಸುವಂತೆ ಸೂಚಿಸಿದ್ದರು.

ಅದರಂತೆ ಶನಿವಾರ ಜಿಲ್ಲೆಯ 8 ಸಿಎನ್‌ಜಿ ಸ್ಟೇಷನ್‌ಗಳಲ್ಲಿ ಅಗತ್ಯವಿರುವಷ್ಟು ಇಂಧನವನ್ನು ಗುತ್ತಿಗೆ ಕಂಪನಿ ಪೂರೈಕೆ ಮಾಡಿದೆ. ಇನ್ನೆರಡು ಸ್ಟೇಷನ್‌ಗಳಿಗೆ ಇಂದು ಇಂಧನ ಪೂರೈಕೆಯಾಗಲಿದೆ. ಇದರಿಂದ ಜಿಲ್ಲೆಯ ಸಿಎನ್‌ಜಿ ವಾಹನ ಚಾಲಕರ ನಿಟ್ಟುಸಿರು ಬಿಡುವಂತಾಗಿದೆ.-----ಹಿಂದಿನ ವರ್ಷಗಳಲ್ಲಿಯೂ ಏಪ್ರಿಲ್ ತಿಂಗಳಲ್ಲಿ ಸಿಎನ್ ಜಿ ಬೇಡಿಕೆ, ಬಳಕೆ ಹೆಚ್ಚಿರುತ್ತದೆ. ಇತ್ತೀಚೆಗೆ ಸಿಎನ್‌ಜಿ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಜೊತೆಗೆ ಇಂಧನ ಪೂರೈಕೆಯಲ್ಲಿಯೂ ತೊಂದರೆಯಾಗಿತ್ತು. ಈಗ ಈ ಸಮಸ್ಯೆಯನ್ನು ಪರಿಹರಿಸಲಾಗಿದೆ.

। ಡಾ.ವಿದ್ಯಾಕುಮಾರಿ, ಉಡುಪಿ ಜಿಲ್ಲಾಧಿಕಾರಿ