ದೇಶದ ಸಾಂವಿಧಾನಿಕ ಸಂಸ್ಥೆ ಚುನಾವಣಾ ಆಯೋಗವನ್ನು ಕೇಂದ್ರ ಸರ್ಕಾರ ಕೈಗೊಂಬೆಯಂತೆ ಬಳಸಿಕೊಂಡು ಮುಖ್ಯ ಆಯುಕ್ತ ಗ್ಯಾನೇಶ್ ಕುಮಾರ್ ಮೂಲಕ ಕ್ರಿಮಿನಲ್ ಕೆಲಸಗಳನ್ನು ಮಾಡಿಸುತ್ತಿದೆ. ಗ್ಯಾನೇಶ್ ಕುಮಾರ್ ಬಿಜೆಪಿಯ ಅಧಿಕಾರ ಭದ್ರಪಡಿಸಿಕೊಳ್ಳಲು ಕಾರ್ಯಾಂಗವನ್ನೇ ಕ್ರಿಮಿನಲ್ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಉಡುಪಿ ವಲಯ ಸಮಿತಿ ವತಿಯಿಂದ ಮಂಗಳವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡಿದರು.

ದೇಶದ ಜನರ ಅಮೂಲ್ಯ ಮತದ ಹಕ್ಕುಗಳನ್ನು ಅನ್ಯಾಯವಾಗಿ ಕಿತ್ತುಕೊಂಡ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸಿ, ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಮತ್ತು ಎಸ್‌ಐಆರ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಸಿಪಿಐಎಂ ಉಡುಪಿ ವಲಯ ಸಮಿತಿ ಕಾರ್ಯದರ್ಶಿ ಶಶಿಧರ್ ಗೊಲ್ಲ ಮಾತನಾಡಿ, ಎಸ್‌ಐಆರ್ ಹಿಂದೆ ಕೇಂದ್ರ ಸರ್ಕಾರ ರಾಜಕೀಯ ತಂತ್ರ ಅಡಗಿದೆ. ಸರ್ಕಾರದ ಒತ್ತಡದಿಂದ ಇಂದು ಅಲ್ಪಸಂಖ್ಯಾತರು, ದಲಿತರು, ಬಡವರು, ಮಹಿಳೆಯರು ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಕವಿರಾಜ್ ಎಸ್.ಕಾಂಚನ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಧರಣಿಯಲ್ಲಿ ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷ ಸಂಜೀವ ಬಳ್ಕೂರು, ಮುಖಂಡರಾದ ಚಂದ್ರಶೇಖರ ವಿ., ಉಮೇಶ್ ಕುಂದರ್, ನಳಿನಿ, ಸರೋಜ, ಪ್ರಭಾಕರ ಕುಂದರ್, ವಾಮನ ಪೂಜಾರಿ, ಸುಭಾಸ್ ಚಂದ್ರ ನಾಯಕ್, ಸುನೀತಾ ಶೆಟ್ಟಿ, ಬಲ್ಕೀಸ್, ಸುನಂದ, ರತ್ನ, ಲಲಿತ ಸುವರ್ಣ, ಸುನಂದ ಕುಕ್ಕಿಕಟ್ಟೆ, ವಸಂತಿ ಉಪಸ್ಥಿತರಿದ್ದರು.