ಉಡುಪಿ: ಸಿಪಿಎಂ ಪ್ರಣಾಳಿಕೆ ಬಿಡುಗಡೆ

| Published : Apr 22 2024, 02:19 AM IST

ಉಡುಪಿ: ಸಿಪಿಎಂ ಪ್ರಣಾಳಿಕೆ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಣಾಳಿಕೆಯಲ್ಲಿ ಸಿಪಿಐ(ಎಂ) ಮತದಾರರಲ್ಲಿ 3 ಮನವಿಯನ್ನು ಮಾಡಿದೆ - ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳನ್ನು ಸೋಲಿಸುವುದು, ಲೋಕಸಭೆಯಲ್ಲಿ ಸಿಪಿಐ(ಎಂ) ಮತ್ತು ಎಡ ಪಕ್ಷಗಳ ಬಲವನ್ನು ಹೆಚ್ಚಿಸುವುದು, ಕೇಂದ್ರದಲ್ಲಿ ಪರ್ಯಾಯ ಜಾತ್ಯಾತೀತ ಸರ್ಕಾರದ ರಚನೆ ಖಾತ್ರಿಗೊಳಿಸುವುದು.

ಕನ್ನಡಪ್ರಭ ವಾರ್ತೆ ಉಡುಪಿ

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಿಪಿಐ(ಎಂ) ಕೇಂದ್ರ ಸಮಿತಿ ಬಿಡುಗಡೆ ಮಾಡಿದ ಪ್ರಣಾಳಿಕೆಯ ಕನ್ನಡ ಪ್ರತಿಯನ್ನು ಉಡುಪಿ ಜಿಲ್ಲಾ ಸಮಿತಿ ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಪಕ್ಷದ ಹಿರಿಯ ಮುಖಂಡರಾದ ಕೆ.ಶಂಕರ್ ವಹಿಸಿದ್ದರು.

ಕಳೆದ 10 ವರ್ಷಗಳ ಅವಧಿಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಸಂವಿಧಾನದ ನಾಲ್ಕು ಆಧಾರ ಸ್ತಂಭಗಳಾದ ಜಾತ್ಯತೀತ ಪ್ರಜಾಪ್ರಭುತ್ವ, ಆರ್ಥಿಕ ಸ್ವಾವಲಂಬನೆ, ಒಕ್ಕೂಟವಾದ ಮತ್ತು ಸಾಮಾಜಿಕ ನ್ಯಾಯ ಇವುಗಳನ್ನು ವ್ಯವಸ್ಥಿತವಾಗಿ ಕಳಚಿ ಹಾಕುತ್ತಿದೆ. ಜನರಲ್ಲಿ ವಿಭಜನೆ ಉಂಟು ಮಾಡುವ ಸಲುವಾಗಿ ವಿಷಪೂರಿತ ಕೋಮುವಾದಿ ಸಿದ್ಧಾಂತವನ್ನು ಹೇರುತ್ತಿದೆ. ಬೆಲೆ ಏರಿಕೆ, ನಿರುದ್ಯೋಗ ತೀವ್ರವಾಗಿ ಹೆಚ್ಚುತ್ತಿದ್ದು, ಜನ ಸಾಮಾನ್ಯರು ಕಷ್ಟಕ್ಕೆ ಒಳಗಾಗಿದ್ದಾರೆ.‌ ಜನರ ತೆರಿಗೆಯ ಹಣದಿಂದ ನಿರ್ಮಾಣವಾದ ಸಾರ್ವಜನಿಕ ‌ಆಸ್ತಿಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇಂತಹ ದುರ್ನೀತಿಯ ಬದಲಾಗಿ ಸಿಪಿಐ(ಎಂ), ರೈತ, ಕಾರ್ಮಿಕ, ದಲಿತ, ಆದಿವಾಸಿ, ಮಹಿಳೆಯರು, ಸಣ್ಣ ಉದ್ದಿಮೆದಾರರ ಪರವಾಗಿರುವ ಪರ್ಯಾಯ ಧೋರಣೆಗಳನ್ನು ಸೂಚಿಸಿದೆ ಎಂದು ಕೆ.ಶಂಕರ್ ಈ ಸಂದರ್ಭದಲ್ಲಿ ಹೇಳಿದರು.

ಪಕ್ಷದ ಜಿಲ್ಲಾ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಎಚ್. ನರಸಿಂಹ, ಸುರೇಶ ಕಲ್ಲಾಗರ, ವೆಂಕಟೇಶ ಕೋಣಿ, ಶಶಿಧರ, ಬಲ್ಕಿಸ್, ಶೀಲಾವತಿ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು. ಇಂಡಿಯಾ ಕೂಟದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ಇದೇ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಮಿತಿ ಪ್ರಕಟಿಸಿದ, ‘ನಾನು ಬಾಂಡ್-ಚುನಾವಣಾ ಬಾಂಡ್’ ಭರ್ಜರಿ ಸುಳ್ಳುಗಳೇ ಮೋದಿ ಗ್ಯಾರಂಟಿಗಳು ಪುಸ್ತಕವನ್ನು ಸಹ ಬಿಡುಗಡೆ ಮಾಡಲಾಯಿತು.

* ಪ್ರಣಾಳಿಕೆಯ 3 ಮನವಿಗಳು

ಪ್ರಣಾಳಿಕೆಯಲ್ಲಿ ಸಿಪಿಐ(ಎಂ) ಮತದಾರರಲ್ಲಿ 3 ಮನವಿಯನ್ನು ಮಾಡಿದೆ - ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳನ್ನು ಸೋಲಿಸುವುದು, ಲೋಕಸಭೆಯಲ್ಲಿ ಸಿಪಿಐ(ಎಂ) ಮತ್ತು ಎಡ ಪಕ್ಷಗಳ ಬಲವನ್ನು ಹೆಚ್ಚಿಸುವುದು, ಕೇಂದ್ರದಲ್ಲಿ ಪರ್ಯಾಯ ಜಾತ್ಯಾತೀತ ಸರ್ಕಾರದ ರಚನೆ ಖಾತ್ರಿಗೊಳಿಸುವುದು.