ಉಡುಪಿ, ದ.ಕ. ಜಿಲ್ಲೆಯಲ್ಲೂ ವಕ್ಫ್ ಹಗರಣ ಸಾಧ್ಯತೆ: ಕೋಟ

| Published : Oct 30 2024, 12:46 AM IST

ಉಡುಪಿ, ದ.ಕ. ಜಿಲ್ಲೆಯಲ್ಲೂ ವಕ್ಫ್ ಹಗರಣ ಸಾಧ್ಯತೆ: ಕೋಟ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರ ಜಿಲ್ಲೆಯಲ್ಲಿ 11,500 ಎಕ್ರೆ ರೈತರ ಭೂಮಿ 2018ರ ವರೆಗೂ ಪಹಣಿಯಲ್ಲಿ ರೈತರ ಹೆಸರು ಇತ್ತು. ಈಗ ವಕ್ಫ್‌ ಬೋರ್ಡ್ ಪಾಲಾಗಿದೆ. ಒಂದು ಸಮುದಾಯವನ್ನು ಓಲೈಸಲು ರಾಜ್ಯ ಸರ್ಕಾರ ಹೀಗೆ ಮಾಡುತ್ತಿದೆ ಎಂದು ಕೋಟ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಹಿಂದೆ ಕಾಂಗ್ರೆಸ್ ಸರ್ಕಾರ ಮಾಡಿದ್ದ ತಪ್ಪಿನಿಂದ ವಿಜಯಪುರ ಜಿಲ್ಲೆಯ ರೈತರ 11,500 ಎಕ್ರೆ ಜಮೀನು ಅನ್ಯಾಯವಾಗಿ ವಕ್ಫ್‌ ಮಂಡಳಿ ಪಾಲಾಗಿದೆ. ಇದು ಕೇವಲ ವಿಜಯಪುರ ಮಾತ್ರಲ್ಲ, ಉಡುಪಿ, ದ.ಕ. ಸಹಿತ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆಗಿರುವ ಸಾಧ್ಯತೆಯಿದೆ. ಸರ್ಕಾರ ಕೂಡಲೇ ರೈತರ ಭೂಮಿಗೆ ಅವರ ಹೆಸರಿನಲ್ಲಿ ಪಹಣಿ ಮಾಡಿಸಬೇಕು, ರಾಜ್ಯಾದ್ಯಂತ ಸರ್ವೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ 11,500 ಎಕ್ರೆ ರೈತರ ಭೂಮಿ 2018ರ ವರೆಗೂ ಪಹಣಿಯಲ್ಲಿ ರೈತರ ಹೆಸರು ಇತ್ತು. ಈಗ ವಕ್ಫ್‌ ಬೋರ್ಡ್ ಪಾಲಾಗಿದೆ. ಒಂದು ಸಮುದಾಯವನ್ನು ಓಲೈಸಲು ರಾಜ್ಯ ಸರ್ಕಾರ ಹೀಗೆ ಮಾಡುತ್ತಿದೆ. ಸರ್ಕಾರದ ವಿರುದ್ಧ ಜನರು ದಂಗೆ ಏಳಲಿದ್ದಾರೆ. ಕಂದಾಯ ಸಚಿವರು ಮಾತನಾಡಿ 124 ರೈತರಿಗೆ ಕಣ್ತಪ್ಪಿನಿಂದ ನೋಟಿಸ್ ಹೋಗಿದೆ ಎಂದಿದ್ದಾರೆ. ಹೀಗಾದರೇ ಜನರು ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.ವಕ್ಫ್‌ ವಿಚಾರದಲ್ಲಿ ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಕಾನೂನು ರೂಪಿಸಿದೆ. ಮುಂದಿನ ಅಧಿವೇಶನದಲ್ಲಿ ಅದು ಮಂಡನೆಯಾಗಲಿದೆ. ಈ ಕಾಯ್ದೆ ಜಾರಿಯಾದರೆ ವಕ್ಫ್‌ ಬೋರ್ಡ್ ಅಕ್ರಮವಾಗಿ ಭೂಮಿ ವಶಪಡಿಸಲು ಸಾಧ್ಯವಿಲ್ಲ ಎಂದರು.* ಜಮೀರ್‌ಗೆ ಸಿಎಂ ಬೆಂಬಲ!

ಸಚಿವ ಜಮೀರ್ ಅಹ್ಮದ್ ಇಡೀ ರಾಜ್ಯ ತಿರುಗುತ್ತಿದ್ದಾರೆ. ಎಲ್ಲವೂ ವಕ್ಫ್ ಆಸ್ತಿ ಎನ್ನುತ್ತಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಬೆಂಬಲ ಕೊಡುತ್ತಿದ್ದಾರೆ. ರೈತರು ಒಂದು ತುಂಡು ಭೂಮಿ ವಕ್ಫ್‌ ಪಾಲಾಗಬಾರದು, ಆದ್ದರಿಂದ ಬಿಜೆಪಿ ಇದನ್ನು ಹೋರಾಟವಾಗಿ ಕೈಗೆತ್ತಿಕೊಳ್ಳುತ್ತದೆ. ತತ್‌ಕ್ಷಣವೇ ರೈತರಿಗೆ ಭೂಮಿ ಹಿಂದಿರುಗಿಸಿ, ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಅವರು ಆಗ್ರಹಿಸಿದರು.* ರೇಷನ್ ಕಾರ್ಡ್ ರದ್ದು ಕೈಬಿಡಿ

ಗ್ಯಾರಂಟಿ ಫಲಾನುಭವಿಗಳ ಸಂಖ್ಯೆ ಕಡಿಮೆ ಮಾಡುವುದು ಅಥವಾ ಇನ್ಯಾವುದೋ ಉದ್ದೇಶದಿಂದ ಬಿಪಿಎಲ್ ಕಾರ್ಡ್ ಪರಿಶೀಲನೆಗೆ ಮುಂದಾಗಿರುವುದನ್ನು ಸರ್ಕಾರ ತತ್‌ಕ್ಷಣ ನಿಲ್ಲಿಸಬೇಕು. ಬಿಪಿಎಲ್ ಕಾರ್ಡ್ ರದ್ಧತಿಯಿಂದ ಕೇಂದ್ರ ಸರ್ಕಾರದ ಅಕ್ಕಿ, ಆಯುಷ್ಮಾನ್ ಯೋಜನೆಯ ಫಲ ಅನೇಕರಿಗೆ ಸಿಗುವುದಿಲ್ಲ. ಸರ್ಕಾರ ಇದರಿಂದ ಹಿಂದೆ ಸರಿಯದಿದ್ದರೆ ಬಿಜೆಪಿ ಜಿಲ್ಲಾಧಿಕಾರಿ ಕಚೇರಿ, ವಿಧಾನಸೌಧ ಮುತ್ತಿಗೆ ಹಾಕಲಿದೆ ಎಂದು ಎಚ್ಚರಿಕೆ ನೀಡಿದರು.* ಹರಿಪ್ರಸಾದ್ ಕ್ಷಮೆಯಾಚಿಸಲಿ

ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಬಗ್ಗೆ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ನೀಡಿರುವ ಹೇಳಿಕೆ ಖಂಡನೀಯ. ಶ್ರೀಗಳ ಬಗ್ಗೆ ಲಘುವಾಗಿ ಮಾತನಾಡಿದ್ದು ಹಿಂದೂ ಸಮಾಜಕ್ಕೆ ನೋವು ತಂದಿದೆ. ಶ್ರೀಪಾದರು ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಿದವರು, ಜನಾಂದೋಲನ ಮಾಡಿದವರು. ಶ್ರೀಪಾದರ ಬಗ್ಗೆ ಇಡೀ ರಾಷ್ಟ್ರದಲ್ಲಿಯೇ ವಿಶೇಷ ಗೌರವ ಇದೆ. ತತ್‌ಕ್ಷಣವೇ ಬಿ.ಕೆ. ಹರಿಪ್ರಸಾದ್ ಅವರು ಕ್ಷಮೆ ಕೇಳಬೇಕು ಎಂದು ಕೋಟ ಆಗ್ರಹಿಸಿದರು.