ಸಾರಾಂಶ
ಈ ಎರಡು ತಿಂಗಳು ಕೃಷ್ಣ ಯೋಗನಿದ್ರೆ ಮಾಡುತ್ತಾನೆ ಎಂಬ ಪೌರಾಣಿಕ ಕಾರಣಕ್ಕೆ ಈ ಅವಧಿಯಲ್ಲಿ ರಥೋತ್ಸವಗಳು ನಡೆಯುತ್ತಿಲ್ಲ. ಇಂದಿನಿಂದ ಮತ್ತೆ ರಥಬೀದಿಯಲ್ಲಿ ನಿತ್ಯ ರಥೋತ್ಸವ ನಡೆಯಲಿದೆ. ಬೇರೆಲ್ಲೂ ಇಲ್ಲದ ನಿತ್ಯವೂ ರಥೋತ್ಸವ ನಡೆಯುವುದು ಉಡುಪಿಯ ವೈಶಿಷ್ಟ್ಯವಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಶ್ರೀ ಕೃಷ್ಣ ಮಠದಲ್ಲಿ ಇಂದಿನಿಂದ (ನ.13) ಕೃಷ್ಣನಿಗೆ ನಿತ್ಯೋತ್ಸವ ಆರಂಭವಾಗಲಿದ್ದು, ಎಲ್ಲ ರೀತಿಯ ಸಿದ್ಧತೆಗಳು ನಡೆದಿವೆ. ಈ ಪ್ರಯುಕ್ತ ಇಂದಿನಿಂದ 4 ದಿನಗಳ ವೈಭವದ ಲಕ್ಷದಿಪೋತ್ಸವ ನಡೆಯಲಿದೆ.ಸಂಪ್ರದಾಯದಂತೆ ಭಾಗೀರಥಿ ಜಯಂತಿಯಂದು ಗರ್ಭಗುಡಿ ಸೇರಿದ ಕೃಷ್ಣನ ಉತ್ಸವ ಮೂರ್ತಿ ಇಂದು ಕಾರ್ತಿಕ ಉತ್ಥಾನ ದ್ವಾದಶಿಯಂದು ಹೊರಗೆ ಬಂದು ರಥವನ್ನೇರಲಿದೆ.ಈ ಎರಡು ತಿಂಗಳು ಕೃಷ್ಣ ಯೋಗನಿದ್ರೆ ಮಾಡುತ್ತಾನೆ ಎಂಬ ಪೌರಾಣಿಕ ಕಾರಣಕ್ಕೆ ಈ ಅವಧಿಯಲ್ಲಿ ರಥೋತ್ಸವಗಳು ನಡೆಯುತ್ತಿಲ್ಲ. ಇಂದಿನಿಂದ ಮತ್ತೆ ರಥಬೀದಿಯಲ್ಲಿ ನಿತ್ಯ ರಥೋತ್ಸವ ನಡೆಯಲಿದೆ. ಬೇರೆಲ್ಲೂ ಇಲ್ಲದ ನಿತ್ಯವೂ ರಥೋತ್ಸವ ನಡೆಯುವುದು ಉಡುಪಿಯ ವೈಶಿಷ್ಟ್ಯವಾಗಿದೆ.ಇಂದು ಮಧ್ಯಾಹ್ನ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಅಷ್ಟ ಮಠಾಧೀಶರು ರಥಬೀದಿಯಲ್ಲಿ ಕಟ್ಟಲಾಗಿರುವ ಅಟ್ಟಳಿಗೆಯಲ್ಲಿ ಹಣತೆಗಳನ್ನಿಟ್ಟು ಲಕ್ಷ ದೀಪೋತ್ಸವದ ಮುಹೂರ್ತ ನೆರವೇರಿಸಲಿದ್ದಾರೆ.ಸಂಜೆ ಮಧ್ವಸರೋವರದ ಮಧ್ಯದಲ್ಲಿರುವ ಮಂಟಪದಲ್ಲಿ ಕ್ಷೀರಾಬ್ಧಿ ಪೂಜೆ ನಡೆಯಲಿದ್ದು, ಮಠಾಧೀಶರು ತಮ್ಮ ಪಟ್ಟದ ದೇವರಿಗೆ ಅರ್ಘ್ಯ ಪ್ರದಾನ ಮಾಡಲಿದ್ದಾರೆ. ನಂತರ ತೆಪ್ಪೋತ್ಸವ ನಡೆಯಲಿದೆ. ರಾತ್ರಿ 7 ಗಂಟೆಗೆ ಮಠದಲ್ಲಿ ಉತ್ಸವ ಮುಹೂರ್ತ ನಡೆದು, ನವಗ್ರಹ ಪೂಜೆ, ನವಗ್ರಹ ದಾನದ ನಂತರ ರಥೋತ್ಸವ ಪ್ರಾರಂಭವಾಗಲಿದೆ.ಇದೇ ಸಂದರ್ಭ 16ರ ವರೆಗೆ ಲಕ್ಷ ದಿಪೋತ್ಸವ ನಡೆಯಲಿದೆ. ಈ 4 ದಿನ ರಥಬೀದಿಯಿಡೀ ಲಕ್ಷ ಹಣತೆಗಳಿಂದ ಬೆಳಗಲಿದೆ. ಈ ಹಣತೆಗಳನ್ನು ಬೆಳಗುವುದು ಬಹಳ ಪುಣ್ಯಪ್ರದ ಎಂಬ ಭಾವನೆಯಿಂದ ಸಾವಿರಾರು ಭಕ್ತರು ಕಾಯುತ್ತಿರುತ್ತಾರೆ.ಉತ್ಥಾನ ದ್ವಾದಶಿಯಂದು ಮನೆಮನೆಗಳಲ್ಲಿ ತುಳಸಿ ಪೂಜೆಯೂ ನಡೆಯುವ ಹಿನ್ನೆಲೆಯಲ್ಲಿ ಮಂಗಳವಾರ ರಥಬೀದಿಯಲ್ಲಿ ಹೂ, ಹಣ್ಣು ಮತ್ತು ನೆಲ್ಲಿಕಾಯಿ ಗಿಡ ಖರೀದಿ ಜೋರಾಗಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಹೊರ ಜಿಲ್ಲೆಯಿಂದ ಆಗಮಿಸಿದ ವ್ಯಾಪಾರಿಗಳು ವಿವಿಧ ಬಗೆಯ ಹೂವು ಮಾರಾಟದಲ್ಲಿ ತೊಡಗಿದ್ದರು.