ಸಾರಾಂಶ
ಶ್ರೀಗಳು ತಮ್ಮ ಪರ್ಯಾಯೋತ್ಸವಕ್ಕೆ ಮೊದಲು ಜಗತ್ತಿನಾದ್ಯಂತ ಭಗವದ್ಗೀತೆಯ ಪ್ರಚಾರ ಮತ್ತು ಜಾಗೃತಿಗಾಗಿ ಈ ಗೀತಾ ಲೇಖನ ಯಜ್ಞ ಯೋಜನೆಯನ್ನು ಘೋಷಿಸಿದ್ದರು. ತಮ್ಮ ಶಾಲಾ ಕಾಲೇಜು, ಸಂಘ ಸಂಸ್ಥೆಗಳ ಭೇಟಿ ಮತ್ತು ದೇಶವಿದೇಶ ಸಂಚಾರದ ಸಂದರ್ಭದಲ್ಲಿ ಈ ಗೀತಾ ಲೇಖನ ಪುಸ್ತಕಗಳನ್ನು ಆಸಕ್ತರಿಗೆ ವಿತರಿಸಿದ್ದರು.
ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಕೃಷ್ಣಮಠದ ಪರ್ಯಾಯ ಪೀಠಾಧಿಪತಿಗಳಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಚತುರ್ಥ ಪರ್ಯಾಯೋತ್ಸವದ ಸಂದರ್ಭದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಂಕಲ್ಪಿಸಿದ ಕೋಟಿ ಗೀತಾ ಲೇಖನ ಯಜ್ಞವು ಭರದಿಂದ ನಡೆಯುತ್ತಿದ್ದು, ದೇಶ ವಿದೇಶಗಳ ಲಕ್ಷಾಂತರ ಭಕ್ತರು ಈ ಲೇಖನ ಯಜ್ಞದ ದೀಕ್ಷೆಯನ್ನು ಪಡೆದಿದ್ದಾರೆ. ಅವರಲ್ಲಿ ನೂರಾರು ಭಕ್ತರು ಉತ್ಸಾಹದಿಂದ ಈಗಾಗಲೇ ಗೀತೆಯ ಲೇಖನವನ್ನು ಪೂರ್ಣಗೊಳಿಸಿದ್ದು, ಮಠಕ್ಕೆ ತಂದೊಪ್ಪಿಸುತ್ತಿದ್ದಾರೆ.
ಸೋಮವಾರ ಶ್ರೀಮಠದ ಭಕ್ತರೂ, ಅಮೆರಿಕದ ನಾರ್ತ್ ಕೆರೋಲಿನಾ ರಾಜ್ಯದ (ರಾಲೇ) ಕ್ಯಾರಿ ನಗರವಾಸಿಗಳಾದ ಸವಿತಾ ಹಾಗೂ ರವಿರಾಜ ಉಪಾಧ್ಯಾಯ ದಂಪತಿ ನೇತೃತ್ವದ ತಂಡದವರು ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿ ತಾವು ಬರೆದಿರುವ ಗೀತಾ ಲೇಖನ ಪುಸ್ತಕವನ್ನು ಪರ್ಯಾಯ ಶ್ರೀಗಳ ಮೂಲಕ ಕೃಷ್ಣನಿಗೆ ಸಮರ್ಪಿಸಿ, ಶ್ರೀಪಾದರಿಂದ ಫಲಮಂತ್ರಾಕ್ಷತೆಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಠದ ಕಾರ್ಯದರ್ಶಿಗಳಾದ ಪ್ರಸನ್ನ ಆಚಾರ್ಯ ಅವರು ಉಪಸ್ಥಿತರಿದ್ದರು.ಶ್ರೀಗಳು ತಮ್ಮ ಪರ್ಯಾಯೋತ್ಸವಕ್ಕೆ ಮೊದಲು ಜಗತ್ತಿನಾದ್ಯಂತ ಭಗವದ್ಗೀತೆಯ ಪ್ರಚಾರ ಮತ್ತು ಜಾಗೃತಿಗಾಗಿ ಈ ಗೀತಾ ಲೇಖನ ಯಜ್ಞ ಯೋಜನೆಯನ್ನು ಘೋಷಿಸಿದ್ದರು. ತಮ್ಮ ಶಾಲಾ ಕಾಲೇಜು, ಸಂಘ ಸಂಸ್ಥೆಗಳ ಭೇಟಿ ಮತ್ತು ದೇಶವಿದೇಶ ಸಂಚಾರದ ಸಂದರ್ಭದಲ್ಲಿ ಈ ಗೀತಾ ಲೇಖನ ಪುಸ್ತಕಗಳನ್ನು ಆಸಕ್ತರಿಗೆ ವಿತರಿಸಿದ್ದರು. ಈ ರೀತಿ ಕೋಟಿ ಭಕ್ತರಿಂದ ಗೀತೆಯನ್ನು ಬರೆಯಿಸಿ ಪರ್ಯಾಯದ ಕೊನೆಯಲ್ಲಿ ಶ್ರೀ ಕೃಷ್ಣನಿಗೆ ಸಮರ್ಪಿಸಿ, ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವುದು ಶ್ರೀಗಳ ಸಂಕಲ್ಪವಾಗಿದೆ.ಅದರಂತೆ ಈಗಾಗಲೇ ಗೀತಾಲೇಖನವನ್ನು ಬರೆದು ಮುಗಿಸಿದವರು ಎರಡು ವರ್ಷಗಳ ಪರ್ಯಾಯ ಅವಧಿಯಲ್ಲಿ ಉಡುಪಿಗೆ ಭೇಟಿ ನೀಡಿ ಶ್ರೀಪಾದರ ಮೂಲಕ ಅವುಗಳನ್ನು ಕೃಷ್ಣನಿಗೆ ಅರ್ಪಿಸಿ ಪ್ರಸಾದವನ್ನು ಸ್ವೀಕರಿಸಬೇಕು ಎಂದು ಮಠದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.