ಸಾರಾಂಶ
ಉಡುಪಿ: ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಪೊಲೀಸ್ ಇಲಾಖೆ ಡ್ರಗ್ಸ್ ದಂಧೆ ವಿರುದ್ಧ ಭರ್ಜರಿ ಬೇಟೆ ನಡೆಸಿದ್ದು, ಒಟ್ಟು 35 ಪ್ರಕರಣಗಳನ್ನು ಭೇದಿಸಿ, 35 ಆರೋಪಿಗಳನ್ನು ಬಂಧಿಸಿದ್ದಾರೆ.ಕುಂದಾಪುರ ಠಾಣೆಯಲ್ಲಿ 7, ಮಣಿಪಾಲ ಠಾಣೆಯಲ್ಲಿ 6, ಕಾರ್ಕಳ ನಗರ ಮತ್ತು ಮಲ್ಪೆ ಠಾಣೆಗಳಲ್ಲಿ ತಲಾ 5, ಉಡುಪಿ ನಗರ ಠಾಣೆಯಲ್ಲಿ 4, ಕಾಪು ಮತ್ತು ಕಾರ್ಕಳ ಗ್ರಾಮಾಂತರ ಠಾಣೆಗಳಲ್ಲಿ ತಲಾ 2 ಪ್ರಕರಣ, ಹಿರಿಯಡಕ, ಕೊಲ್ಲೂರು, ಕೋಟ ಮತ್ತು ಶಿರ್ವಾ ಠಾಣೆಗಳಲ್ಲಿ ತಲಾ 1 ಪ್ರಕರಣಗಳು ದಾಖಲಾಗಿವೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. 15 ಲಕ್ಷ ರು. ಗಳ ಡ್ರಗ್ಸ್ ನಾಶ:
ಈ ಹಿಂದಿನ 10 ಪ್ರಕರಣಗಳಲ್ಲಿ ಸುಮಾರು 9.937 ಕೆಜಿ ತೂಕದ ಅಂದಾಜು 7,12,963 ರು. ಮೌಲ್ಯದ ಗಾಂಜಾ, 345.596 ಗ್ರಾಂ ಎಂಡಿಎಂಎ ಅಂದಾಜು 8,08,464 ರು. ಹಾಗೂ 61.430 ಗ್ರಾಂ ಬಿಳಿ ಮಾದಕ ಪೌಡರ್ ವಶಪಡಿಸಿಕೊಳ್ಳಲಾಗಿತ್ತು. ಅದನ್ನು ಗುರುವಾರ ಪಡುಬಿದ್ರಿ ಮೆ. ಆಯುಷ್ ಎನ್‌ವಿರೋಟೆಕ್ ಸಂಸ್ಥೆಯ ಬಾಯ್ಲರಿನಲ್ಲಿ ನಾಶಪಡಿಸಲಾಯಿತು. ನಾಶಪಡಿಸಿದ ಈ ಮಾದಕ ದ್ರವ್ಯಗಳ ಒಟ್ಟು ಮೌಲ್ಯ 15,21,427 ರು. ಆಗಿರುತ್ತದೆ.ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಎಸ್ಪಿ, ಜಿಲ್ಲಾ ಡ್ರಗ್ ಡಿಸ್‌ಪೋಸಲ್ ಕಮಿಟಿಯ ಅಧ್ಯಕ್ಷ ಹರಿರಾಮ್ ಶಂಕರ್, ಎಎಸ್ಪಿ ಡಾ. ಹರ್ಷಾ ಪ್ರಿಯಂವದಾ, ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ಇತರ ಪೊಲೀಸ್ ಅಧಿಕಾರಿಗಳು ಇದ್ದರು.
ಆರೋಪಿಗೆ 8000 ರು. ದಂಡ:2021ರ ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾದ ಅಬ್ದುಲ್ ರಹಿಮಾನ್ ಮೇಲಿನ ಮಾಧಕ ವಸ್ತು ಮಾರಾಟದ ಆರೋಪ ಸಾಬೀತಾಗಿದ್ದು, ನ್ಯಾಯಾಲಯವು 8,000 ರು, ಜುಲ್ಮಾನೆ ವಿಧಿಸಿ ಶಿಕ್ಷೆ ಪ್ರಕಟಿಸಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.