ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸಾವಿರಾರು ಸಕ್ರಿಯ ರಕ್ತದಾನಿಗಳಿದ್ದಾರೆ. ಇಂದು ಅವರಿಂದಾಗಿ ಜಿಲ್ಲೆಯಲ್ಲಿ ವೈದ್ಯಕೀಯ ಕ್ಷೇತ್ರವು ಮಹತ್ವದ ಸಾಧನೆ ಮಾಡಿದೆ. ಜಿಲ್ಲೆಯು ರಕ್ತದಾನಿಗಳ ಜಿಲ್ಲೆ ಎಂದು ಗುರುತಿಸಲ್ಪಟ್ಟು, ರಾಜ್ಯಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕ ರಾಜ್ಯರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಹೇಳಿದರು.

ಅವರು ಸೋಮವಾರ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕುಂದಾಪುರ ರೆಡ್‌ಕ್ರಾಸ್ ಸಭಾಪತಿ ಜಯಕರ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ರಕ್ತದ ತೀವ್ರ ಕೊರತೆಯಿದ್ದು ರಕ್ತದಾನದ ಬಗ್ಗೆ ಇನ್ನಷ್ಟು ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ರತ್ನ ಸುವರ್ಣ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಹಲವು ಬಾರಿ ರಕ್ತದಾನ ಮಾಡಿ ಅಮೂಲ್ಯ ಜೀವ ಉಳಿಸಿದ ರಕ್ತದಾನಿಗಳಾದ ಸುಕನ್ಯಾ ಎಂ. ಕಳಸ, ಅಕ್ಷತ್ ನಾಯಕ್, ವಿಶ್ವನಾಥ ನಾಯಕ್, ರಘುರಾಮ್, ಶಿವಕುಮಾರ್ ಶೆಟ್ಟಿಗಾರ್ ಮತ್ತು ರಮೇಶ್ ಕರ್ಕೇರ ಅವರನ್ನು ಜಿಲ್ಲಾ ರೆಡ್‌ಕ್ರಾಸ್ ಪರವಾಗಿ ಸನ್ಮಾನಿಸಲಾಯಿತು. ಸುಕನ್ಯ ಮತ್ತು ಶಿವಕುಮಾರ್ ಶೆಟ್ಟಿಗಾರ್ ಸನ್ಮಾನಿತರ ಪರವಾಗಿ ರಕ್ತದಾನದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಜಿಲ್ಲಾ ರೆಡ್‌ಕ್ರಾಸ್ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ., ಆಡಳಿತ ಮಂಡಳಿಯ ಸದಸ್ಯ ಟಿ. ಚಂದ್ರಶೇಖರ್ ಉಪಸ್ಥಿತರಿದ್ದರು. ರೆಡ್‌ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಸ್ವಾಗತಿಸಿ, ಸದಸ್ಯ ಪ್ರೊ. ದಯಾನಂದ ಡಿ. ನಿರೂಪಿಸಿ, ಖಚಾಂಚಿ ರಮಾದೇವಿ ವಂದಿಸಿದರು.