ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ನಗರದ ಬ್ರಾಹ್ಮೀ ಸಭಾ ಭವನದಲ್ಲಿ ನಡೆದ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಧ್ಯಾತ್ಮ ಹಾಗೂ ಕಾರ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಮೂರು ಜನ ವಿಪ್ರೋತ್ತಮರಿಗೆ ಗೌರವ ಸಮರ್ಪಣೆ ಮಾಡಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ರಘುಪತಿ ಭಟ್, ರೋಬೋಸಾಫ್ಟ್ ಸಂಸ್ಥೆಯ ಅಧಿಕಾರಿ ಕೃಷ್ಣರಾಜ ರಾವ್, ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಚೈತನ್ಯ ಎಂ.ಜಿ. ಹಾಗೂ ಮಾಜಿ ಅಧ್ಯಕ್ಷ ವಿಷ್ಣುಪ್ರಸಾದ್ ಪಾಡಿಗಾರು ಉಪಸ್ಥಿತರಿದ್ದರು.ಶ್ರೀ ಕುದುಕುಳ್ಳಿ ಈಶ್ವರ ದೇವಸ್ಥಾನದ ಅರ್ಚಕ, ದೇವಳಗಳ ಬ್ರಹ್ಮಕಲಶದ ಸಂದರ್ಭದಲ್ಲಿ ಅಷ್ಟಬಂಧ ಒದಗಿಸುವ ಸಗ್ರಿ ಅನಂತ ಭಟ್, ಕಕ್ಕುಂಜೆಯ ಶಿವಳ್ಳಿ ಶ್ರೀ ವಿಷ್ಣುಮೂರ್ತಿ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಅರ್ಚಕ, ದೇವಳದ ಸರ್ವತೋಮುಖ ಅಭಿವೃದ್ಧಿಗೆ ಅರ್ಪಿಸಿಕೊಂಡ ವಿಷ್ಣುಮೂರ್ತಿ ಶಾಸ್ತ್ರಿ ಕಕ್ಕುಂಜೆ ಮತ್ತು ಪರಿಷತ್ತಿನ ಕಾರ್ಯಕ್ರಮಗಳಿಗೆ ಫಲಾಪೇಕ್ಷೆ ಇಲ್ಲದೆ ಸೇವೆ ನೀಡುವ ಛಾಯಾಚಿತ್ರಗ್ರಾಹಕ ರಂಗನಾಥ ಸರಳಾಯ ಅವರಿಗೆ ಪರಿಷತ್ತಿನ ವತಿಯಿಂದ ಗೌರವಾರ್ಪಣೆ ನೀಡಲಾಯಿತು.ಈ ಸಂದರ್ಭದಲ್ಲಿ ಅಶಕ್ತರಿಗೆ ವೈದ್ಯಕೀಯ ಸಹಾಯಧನ ಹಸ್ತಾಂತರಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಚೈತನ್ಯ ಎಂ.ಜಿ. ಅವರು ಯುವಬ್ರಾಹ್ಮಣ ಪರಿಷತ್ತು ನಡೆದು ಬಂದ ದಾರಿಯ ಬಗ್ಗೆ ಸವಿವರವಾಗಿ ಸಭೆಗೆ ತಿಳಿಸಿದರು. ಪರಿಷತ್ತಿನ ಅಧ್ಯಕ್ಷ ಚಂದ್ರಕಾಂತ್ ಕೆ.ಎನ್. ಸ್ವಾಗತಿಸಿದರು. ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ ಅತಿಥಿಗಳನ್ನು ಗೌರವಿಸಿದರು. ಸನ್ಮಾನಿತರನ್ನು ವಿಷ್ಣುಪ್ರಸಾದ್ ಪಾಡಿಗಾರು ಪರಿಚಯಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ವಂದಿಸಿದರು. ವಿವೇಕಾನಂದ ಪಾಂಗಣ್ಣಾಯ ಕಾರ್ಯಕ್ರಮವನ್ನು ನಿರ್ವಹಿಸಿದರು.