ಮಂಗಳೂರು/ಉಡುಪಿ: ಯೇಸುಕ್ರಿಸ್ತರ ಪುನರುತ್ಥಾನದ ಹಬ್ಬವಾದ ಈಸ್ಟರ್‌ನ್ನು ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕ್ರೈಸ್ತ ಸಮುದಾಯದವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಮಂಗಳೂರು ಕೆಥೋಲಿಕ್‌ ಧರ್ಮಪ್ರಾಂತದ ಎಲ್ಲ ಚರ್ಚ್‌ಗಳಲ್ಲಿ ಶನಿವಾರ ರಾತ್ರಿ ಜಾಗರಣೆಯ ಬಲಿಪೂಜೆ ನಡೆದು, ಭಾನುವಾರ ಬೆಳಗ್ಗೆ ಈಸ್ಟರ್‌ ಬಲಿಪೂಜೆ ನಡೆಯಿತು.ಮಂಗಳೂರು ಧರ್ಮಪ್ರಾಂತ್ಯದ ಬಿಷಪ್‌ ಅ.ವಂ.ಡಾ. ಪೀಟರ್‌ ಪಾವ್ಲ್‌ ಸಲ್ಡಾನಾ ಅವರು ಈಸ್ಟರ್‌ ಹಬ್ಬದ ಬಲಿಪೂಜೆಯನ್ನು ಬಿಷಪ್‌ ಹೌಸ್‌ ಚಾಪೆಲ್‌ನಲ್ಲಿ ನೆರವೇರಿಸಿದರು. ಆಯಾ ಚರ್ಚ್‌ಗಳಲ್ಲಿ ಸ್ಥಳೀಯ ಧರ್ಮಗುರುಗಳ ನೇತೃತ್ವದಲ್ಲಿ ಬಲಿಪೂಜೆ ಸಹಿತ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.ಶನಿವಾರ ರಾತ್ರಿ ಬೆಳಕು ಆಶೀರ್ವಚನ ನಡೆಯಿತು. ಧರ್ಮಗುರುಗಳು ಮುಖ್ಯ ಮೋಂಬತ್ತಿಯನ್ನು ಬೆಳಗಿದ ನಂತರ ಮೊಂಬತ್ತಿಯ ಮೆರವಣಿಗೆ ನಡೆದು ಬಲಿಪೂಜೆಯ ವೇಳೆ ಕ್ಯಾಂಡಲ್‌ಗಳನ್ನು ಹಿಡಿದುಕೊಂಡು ವಾಗ್ದಾನಗಳನ್ನು ನವೀಕರಿಸಿದರು.ಉಡುಪಿ ವರದಿ:ಯೇಸುವಿನ ತ್ಯಾಗ ಮತ್ತು ಬಲಿದಾನವನ್ನು ನೆನಪಿಸುತ್ತಾ ಉಪವಾಸ ಮತ್ತು ವೃತಾಚರಣೆಯಲ್ಲಿ ತೊಡಗಿದ್ದ ಉಡುಪಿ ಜಿಲ್ಲೆಯ ಕ್ರೈಸ್ತ ಬಾಂಧವರು ಯೇಸುಕ್ರಿಸ್ತ ಪುನರುತ್ಥಾನದ ಈಸ್ಟರ್ ಹಬ್ಬವನ್ನು ಭಾನುವಾರ ಸಂಭ್ರಮದಿಂದ ಆಚರಿಸಿದರು.ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಭಾನುವಾರದ ಈಸ್ಟರ್ ಹಬ್ಬದ ವಿಶೇಷ ಪ್ರಾರ್ಥನಾ ವಿಧಿ ಮತ್ತು ಬಲಿಪೂಜೆ ನೆರವೇರಿದವು. ಮನೆಗಳಲ್ಲೂ ನೆಂಟರಿಷ್ಟರು ಮತ್ತು ಅತಿಥಿಗಳನ್ನು ಸ್ವಾಗತಿಸಿ ಅವರೊಂದಿಗೆ ಹಬ್ಬದ ವಿಶೇಷ ಊಟ ಸವಿದು ಸಂತೋಷವನ್ನು ಹಂಚಿಕೊಂಡರು. ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಶನಿವಾರ ರಾತ್ರಿ ಜರುಗಿದ ಪಾಸ್ಕ ಜಾಗರಣೆಯಲ್ಲಿ ಭಾಗವಹಿಸಿದ್ದು ಭಾನುವಾರ ತಮ್ಮ ನಿವಾಸದಲ್ಲಿನ ಚಾಪೆಲ್ ನಲ್ಲಿ ಪ್ರಾರ್ಥನೆ ಸಲ್ಲಿಸಿದರು.ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ನಡೆದ ಈಸ್ಟರ್ ಭಾನುವಾರದ ಬಲಿಪೂಜೆಯ ನೇತೃತ್ವನ್ನು ಧರ್ಮಗುರು ವಂ|ಡೆನಿಸ್ ಡೆಸಾ ವಹಿಸಿದ್ದರು. ಈ ವೇಳೆ ಧರ್ಮಪ್ರಾಂತ್ಯದ ಪಾಕ್ಷಿಕ ಪತ್ರಿಕೆ ಉಜ್ವಾಡ್ ಸಂಪಾದಕ ವಂ.ಆಲ್ವಿನ್ ಸಿಕ್ವೇರಾ ಉಪಸ್ಥಿತರಿದ್ದರುಭಾನುವಾರ ಬೆNಗ್ಗೆ ಹೊಸ ಬಟ್ಟೆಗಳನ್ನುಟ್ಟು ಖುಷಿಯಿಂದ ಚರ್ಚಿನ ಪ್ರಾರ್ಥನಾವಿಧಿಯಲ್ಲಿ ಭಾಗವಹಿಸಿ ಬಳಿಕ ಧರ್ಮಗುರುಗಳಿಂದ ಆಶೀರ್ವಾದ ಪಡೆದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಮನೆಗೆ ತೆರಳಿ ಕುಟುಂಬಿಕರು, ಸ್ನೇಹಿತರೊಂದಿಗೆ ಸೇರಿ ಹಬ್ಬವನ್ನು ಆಚರಿಸಿದರು.