ಸಾರಾಂಶ
ಜಿಲ್ಲಾ ಕೃಷಿಕ ಸಂಘ ವತಿಯಿಂದ ಶುಕ್ರವಾರ ರಜತಾದ್ರಿಯ ಜಿಲ್ಲಾಧಿಕಾರಿ ಮುಂದೆ ಈ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಡುಪಿಯ ರೈತರು ಬೆಳೆದ ಸಾವಯವ ಅಕ್ಕಿಯನ್ನು ಕೆ.ಜಿ.ಗೆ 60 ರು. ನಂತೆ ಗಣ್ಯರಿಗೆ ಮಾರಾಟ ಮಾಡುವ ಮೂಲಕ, ಭತ್ತಕ್ಕೆ ಬೆಂಬಲ ಬೆಲೆ ಘೋಷಣೆಗೆ, ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯಿಸಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.ಜಿಲ್ಲಾ ಕೃಷಿಕ ಸಂಘ ವತಿಯಿಂದ ಶುಕ್ರವಾರ ಇಲ್ಲಿನ ರಜತಾದ್ರಿಯ ಜಿಲ್ಲಾಧಿಕಾರಿ ಮುಂದೆ ಈ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭ ಜಿಲ್ಲಾ ಕೃಷಿಕ ಸಂಘ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ, ಸರ್ಕಾರವು ಕ್ವಿಂಟಲ್ ಭತ್ತಕ್ಕೆ 3000 ರು.ನಂತೆ ಬೆಂಬಲ ಬೆಲೆ ನೀಡಿ ತಾಲೂಕು ಕೇಂದ್ರಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಆಗ್ರಹಿಸಿದರು.ಇನ್ನೇನು ಭತ್ತದ ಕೊಯ್ಲು ಆರಂಭವಾಗಲಿರುವುದರಿಂದ ಸೆಪ್ಟೆಂಬರ್ ಅಂತ್ಯದಲ್ಲೇ ಸರ್ಕಾರವು ಬೆಂಬಲ ಬೆಲೆ ಘೋಷಣೆ ಮಾಡಬೇಕು ಮತ್ತು ಭತ್ತ ಖರೀದಿಸುವ ವ್ಯವಸ್ಥೆ ಮಾಡಬೇಕು ಎಂದವರು ಹೇಳಿದರು.ಮಳೆಯಿಂದ ಭತ್ತದ ಕೃಷಿಗೆ ಭಾರಿ ಹಾನಿಯಾಗಿದ್ದು, ಸರ್ಕಾರ ನೀಡುವ ಪರಿಹಾರದ ಮೊತ್ತ ಬಹಳ ಕಡಿಮೆ. ಆದ್ದರಿಂದ ಎಕರೆಗೆ ಕನಿಷ್ಠ 15 ಸಾವಿರ ರು.ಗಳಷ್ಟಾದರೂ ಪರಿಹಾರ ನೀಡಬೇಕು ಎಂದವರು ಆಗ್ರಹಿಸಿದರು.ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಮಾತನಾಡಿ, ಸರ್ಕಾರಗಳು ಹೊರ ರಾಜ್ಯಗಳಿಂದ ಭತ್ತ ತರಿಸಿಕೊಳ್ಳುವುದರಿಂದ ಇಲ್ಲಿನ ರೈತರು ಬೆಳೆದ ಭತ್ತಕ್ಕೆ ಬೆಲೆ ಇಲ್ಲವಾಗಿದೆ. ಇದನ್ನು ತಕ್ಷಣ ನಿಲ್ಲಿಸಬೇಕು. ಖಾಸಗಿವರು ಕಟಾವು ಯಂತ್ರಗಳಿಗೆ ಹೆಚ್ಚಿನ ಬಾಡಿಗೆ ಪಡೆಯುತ್ತಿದ್ದು, ಸರ್ಕಾರ ಇದನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್, ದಿನೇಶ್ ಶೆಟ್ಟಿ ಹೆರ್ಗ, ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು, ರೈತಧ್ವನಿ ಕೊಟ ಅಧ್ಯಕ್ಷ ಜಯರಾಂ ಶೆಟ್ಟಿ ಮಣೂರು, ಭಾಸ್ಕರ್ ಶೆಟ್ಟಿ ಮಣೂರು, ತಿಮ್ಮ ಕಾಂಚನ್, ಶಿವಮೂರ್ತಿ ಉಪಾಧ್ಯಾಯ ಉಪಸ್ಥಿತರಿದ್ದರು.