ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿಗಳನ್ನು ಅನುಷ್ಟಾನಗೊಳಿಸುವ ಮೂಲಕ ಬಡವರ್ಗದ ಜನತೆಯ ಬದುಕು ಕಟ್ಟುವ ಕೆಲಸವನ್ನು ರಾಜ್ಯ ಸರ್ಕಾರ ನಿರ್ವಹಿಸಿದೆ. ಪ್ರಸ್ತುತ ಈ ಯೋಜನೆಗಳನ್ನು ಪಡೆಯುವಲ್ಲಿ ರಾಜ್ಯದಲ್ಲಿಯೇ ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿರುವುದು ಅತ್ಯಂತ ಸಂತೋಷ ತಂದಿದೆ ಎಂದು ಗ್ಯಾರಂಟಿ ಯೋಜನೆಯ ಅನುಷ್ಟಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಹೇಳಿದ್ದಾರೆ.ಸ್ಥಳೀಯ ತಾ.ಪಂ.ನಲ್ಲಿ ಮಂಗಳವಾರ ಕಾರ್ಕಳ ಗ್ಯಾರಂಟಿ ಯೋಜನಾ ಅನುಷ್ಟಾನ ಸಮಿತಿ ಕಚೇರಿ ಉದ್ಘಾಟನೆ ಮತ್ತು ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ಹಲವರು ಈ ಗ್ಯಾರಂಟಿ ಯೋಜನೆಗಳನ್ನು ದೂರುವ ಕೆಲಸವನ್ನು ಮಾಡುತ್ತಿದ್ದಾರೆ. ಅಂಥವರು ಈ ಗ್ಯಾರಂಟಿ ಯೋಜನೆಗಳನ್ನು ತಿರಸ್ಕರಿಸಲು ಅವಕಾಶವಿದ್ದು, ಸರ್ಕಾರ ಸ್ವೀಕರಿಸಲು ಸಿದ್ಧವಿದೆ. ಅಗತ್ಯತೆಯುಳ್ಳ ಫಲಾನುಭವಿಗಳು ಮಾತ್ರ ಈ ಯೋಜನೆಯನ್ನು ಪಡೆದುಕೊಳ್ಳಲು ಅವಕಾಶವಿದೆ ಎಂದು ಟೀಕಾಕಾರರ ಮೇಲೆ ಪರೋಕ್ಷವಾಗಿ ಹರಿಹಾಯ್ದರು. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರವು ವೈದ್ಯಕೀಯ ಮತ್ತು ಉಚಿತ ಶಿಕ್ಷಣ ಒದಗಿಸುವಲ್ಲಿ ಪ್ರಯತ್ನಿಸಿದರೆ, ಪ್ರತಿಯೊಬ್ಬರ ಬದುಕು ಹಸನಾಗಬಹುದು ಎಂಬ ಆಶಯ ವ್ಯಕ್ತಪಡಿಸಿದರು.ಗ್ಯಾರಂಟಿ ಯೋಜನೆಯ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ಕಚೇರಿ ಉದ್ಘಾಟಿಸಿ, ಕೊರೋನಾದ ಬಳಿಕದ ದಿನಗಳಲ್ಲಿ ಪ್ರತಿಯೊಂದು ವರ್ಗದ ಜನತೆ ಬದುಕು ನಿರ್ವಹಿಸಲು ಸಂಕಷ್ಟಪಟ್ಟ ಸಂದರ್ಭ, ಪರಿಹಾರ ಕಂಡುಕೊಳ್ಳುವಲ್ಲಿ ಈ ಯೋಜನೆಗಳನ್ನು ಸರ್ಕಾರ ರೂಪಿಸಿ ಕಾರ್ಯಗತಗೊಳಿಸಿದೆ ಎಂದರು.ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಟಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ ಮಾತನಾಡಿ, ಬಡವರ ಪರ ಕಾಳಜಿವುಳ್ಳವರು ಈ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವುದಿಲ್ಲ. ಅಧಿಕಾರಿಗಳು ಕೂಡ ಯಾರ ಒತ್ತಡಕ್ಕೂ ಮಣಿಯದೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದರು.ತಹಸೀಲ್ದಾರ್ ಪ್ರದೀಪ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶಶಿಧರ್, ಪುರಸಭೆ ಮುಖ್ಯಾಧಿಕಾರಿ ರೂಪ ಜಿ. ಶೆಟ್ಟಿ, ಗ್ಯಾರಂಟಿ ಯೋಜನೆಯ ಸದಸ್ಯರಾದ ರಜನಿ, ರಾಕೇಶ್ ನಾಯ್ಕ್, ಪ್ರಶಾಂತ್ ಪೂಜಾರಿ, ಸಹೀಂ ಅಯ್ಯಪ್ಪನಗರ, ಜಯ ಕುಲಾಲ್, ಸುರೇಶ್ ಆಚಾರ್ಯ, ಸಂತೋಷ್ ದೇವಾಡಿಗ, ಸಂತೋಷ್ ಶೆಟ್ಟಿ, ಹೇಮಂತ್ ಆಚಾರ್ಯ, ಯತೀಶ್ ಕೋಟ್ಯಾನ್, ಪಿಲಿಫ್ ಮಸ್ಕರೇನಸ್, ಶೋಭಾರಾಣಿ, ಸರಿತಾ ಎಂ, ವಿಶ್ವನಾಥ ಭಂಡಾರಿ ಮತ್ತಿತರರು ಇದ್ದರು.
ಶಶಿಧರ್ ನಿರೂಪಿಸಿದರು, ಕೃಷ್ಣಾನಂದ ವಂದಿಸಿದರು.