ಉಡುಪಿ: ಜಿಲ್ಲಾ ನ್ಯಾಯಾಲಯದಲ್ಲಿ ಆರೋಗ್ಯ ತಪಾಸಣೆ ಉಚಿತ ಶಿಬಿರ

| Published : Dec 23 2024, 01:00 AM IST

ಸಾರಾಂಶ

ಉಡುಪಿ ವಕೀಲರ ಸಂಘದ ಆಶ್ರಯದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಸ್ವಯಂಪ್ರೇರಿತ ರಕ್ತದಾನ ಶಿಬಿರವು ಶನಿವಾರ ಉಡುಪಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ವಕೀಲರ ಸಂಘದ ಆಶ್ರಯದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಸ್ವಯಂಪ್ರೇರಿತ ರಕ್ತದಾನ ಶಿಬಿರವು ಶನಿವಾರ ಉಡುಪಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ಸೂರಜ್ ಗೋವಿಂದ್ ರಾಜ್ ಮಾತನಾಡಿ, ಮಾನವನ ದೇಹದಲ್ಲಿನ ಏರುಪೇರುಗಳಿಗೆ ವೈದ್ಯರು ಮಾರ್ಗದರ್ಶಕರಾದರೆ, ಸಮಾಜದಲ್ಲಿ ಅನೇಕ ಸಮಸ್ಯೆಗಳಿಗೆ ವಕೀಲರು ವೈದ್ಯರಾಗಿರುತ್ತಾರೆ‌. ಹೀಗಾಗಿ ನ್ಯಾಯವಾದಿಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ಲಕ್ಷ್ಯ ವಹಿಸಬೇಕು ಎಂದರು.ಸಾಮಾನ್ಯವಾಗಿ ನ್ಯಾಯವಾದಿಗಳು ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಕಾಯಿಲೆಗಳಿಂದ ನಿತ್ಯ ಜೀವನದಲ್ಲಿ ಕಿರಿಕಿರಿ ಅನುಭವಿಸುತ್ತಿದ್ದಾರೆ ಎಂಬ ಅಂಶವು ವೈದ್ಯಕೀಯ ವರದಿಯಲ್ಲಿ ಬಯಲಾಗಿದೆ. ಹೀಗಾಗಿ ವೈದ್ಯರ ಸಲಹೆಗಳನ್ನು ಪಡೆದು ಆರೋಗ್ಯವಂತರಾಗಿರಿ ಎಂದು ಹೇಳಿದರು.ಯುವ ಪೀಳಿಗೆ ರಕ್ತದಾನ ಮಾಡಲು ಉತ್ಸುಕರಾಗಿರಬೇಕು. ವ್ಯಕ್ತಿಯೊಬ್ಬ ಮಾಡಬಹುದಾದ ದೊಡ್ಡ ದಾನ ಎಂದರೆ ಅದು ರಕ್ತದಾನ. ನೀವು ದಾನವಾಗಿ ನೀಡುವ ರಕ್ತದಿಂದ ಅನೇಕರ ಜೀವ ಉಳಿಯುತ್ತದೆ. ರಕ್ತದಾನದ ಬಗೆಗೆ ಇರುವ ತಪ್ಪು ಕಲ್ಪನೆಗಳನ್ನು ದೂರವಿರಿಸಿ, ರಕ್ತದಾನ ಮಾಡಿ ಎಂದವರು ಕರೆ ನೀಡಿದರು.ಮಾಹೆ ಮಣಿಪಾಲದ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಶುಭಹಾರೈಸಿದರು.ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್ ಅಧ್ಯಕ್ಷತೆ ವಹಿಸಿದ್ದರು.ಉಡುಪಿ ವಕೀಲರ ಸಂಘ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಪ್ರ‌.ಕಾರ್ಯದರ್ಶಿ ರಾಜೇಶ್ ಎ.ಆರ್. ವಂದಿಸಿದರು. ನ್ಯಾಯಾಲಯದ ಸಿಬ್ಬಂದಿ ಶಾಂಭವಿ ಪ್ರಾರ್ಥಿಸಿದರು. ನ್ಯಾಯವಾದಿ ಸಹನಾ ಕುಂದರ್ ನಿರೂಪಿಸಿದರು.ಇದೇ ವೇಳೆ ಉಡುಪಿ ವಕೀಲರ ಸಂಘದ ಸದಸ್ಯರಿಗೆ ವಿಶೇಷ ಆರೋಗ್ಯ ಕಾರ್ಡ್ - ಉಡುಪಿ ಲಾಯರ್ ಪ್ರಿವಿಲೆಜ್ ಕಾರ್ಡ್ ವಿತರಿಸಲಾಯಿತು. ನ್ಯಾಯವಾದಿಗಳು ರಕ್ತದಾನ ಮಾಡಿದರು.ನ್ಯಾ.ಸೂರಜ್ ಗೋವಿಂದ್ ರಾಜ್ ಅವರನ್ನು ಉಡುಪಿ ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯಿತು.