ಉಡುಪಿ ಜಿಲ್ಲಾಡಳಿತದ ಸಹಯೋಗದಲ್ಲಿ ಜಿಲ್ಲೆಯ ಪ್ರಥಮ ಫುಲ್ ಮ್ಯಾರಾಥಾನ್ ಓಟವನ್ನು ಜ. 11ರಂದು ಆಯೋಜಿಸಲಾಗಿದೆ
ಉಡುಪಿ: ಉಡುಪಿ ಜಿಲ್ಲಾಡಳಿತದ ಸಹಯೋಗದಲ್ಲಿ ಜಿಲ್ಲೆಯ ಪ್ರಥಮ ಫುಲ್ ಮ್ಯಾರಾಥಾನ್ ಓಟವನ್ನು ಜ. 11ರಂದು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ.ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಉಡುಪಿಯ ಪ್ರವಾಸೋದ್ಯಮ, ಪರಂಪರೆಯ ಪ್ರತೀಕವಾಗಿ, ಆರೋಗ್ಯ ಮತ್ತು ಕ್ರೀಡೆ ಪ್ರೋತ್ಸಾಹಿಸುವುದಕ್ಕಾಗಿ ಈ 42.195 ಕಿ.ಮೀ. ದೂರದ ಮ್ಯಾರಾಥಾನ್ ಓಟವನ್ನು ಆಯೋಜಿಸಲಾಗುತ್ತಿದೆ. ಜೊತೆಗೆ 21.097 ಕಿಮೀ ಹಾಫ್ ಮ್ಯಾರಾಥಾನ್, 10 ಕಿ.ಮೀ., 5 ಕಿ.ಮೀ. ಓಟಗಳು ಮಹಿಳೆ ಮತ್ತು ಪುರುಷರಿಗಾಗಿ ಪ್ರತ್ಯೇಕ, ವಿವಿಧ ವಯೋಮಾನ ವಿಭಾಗಗಳಲ್ಲಿ ನಡೆಸಲಾಗುತ್ತದೆ ಎಂದ ಜಿಲ್ಲಾಧಿಕಾರಿ, ಇದೇ ಸಂದರ್ಭದಲ್ಲಿ ಓಟದಲ್ಲಿ ಭಾಗವಹಿಸಲಿಚ್ಛಿಸುವವರಿಗೆ ನೋಂದಣಿಗೆ ಅಧಿಕೃತ ಚಾಲನೆ ನೀಡಿದರು.
ಈ ಸ್ಪರ್ಧೆಯನ್ನು ಮ್ಯಾರಾಥಾನ್ ಏರ್ಪಡಿಸುವಲ್ಲಿ ಪರಿಣಿತರಾಗಿರುವ ಎನ್‌ಇಬಿ ಸ್ಪೋರ್ಟ್ಸ್ ಮೂಲಕ ನಡೆಸಲಾಗುತ್ತಿದ್ದು, ಈ ಸಂಸ್ಥೆಯ ನಿರ್ದೇಶಕ ನಾಗರಾಜ್ ಅಡಿಗ ಅವರು, ಈ ಮ್ಯಾರಾಥಾನ್‌ನಲ್ಲಿ 5 ಲಕ್ಷ ರು. ಮೊತ್ತದ ಬಹುಮಾನಗಳನ್ನು ವಿತರಿಸಲಾಗುತ್ತದೆ. ಜೊತೆಗೆ ರಾಷ್ಟ್ರೀಯ ದಾಖಲೆಯನ್ನು ಮುರಿದ ಓಟಗಾರರಿಗೆ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ತಲಾ 2.50 ಲಕ್ಷ ರು.ಗಳ ನಗರದ ಬಹುಮಾನವನ್ನೂ ನೀಡಲಾಗುತ್ತದೆ ಎಂದರು.ಉಡುಪಿಯಲ್ಲಿ ಕ್ರೀಡಾ ಹಬ್ ಆಗಿ ರೂಪಿಸುವಲ್ಲಿ, ಮೊದಲು ವರ್ಷದ ಈ ಸ್ಪರ್ಧೆಯಲ್ಲಿ ಸುಮಾರು 6ರಿಂದ 7 ಸಾವಿರ ಓಟಗಾರರು ರಾಷ್ಟ್ರದಾದ್ಯಂತ ಭಾಗವಹಿಸುವ ನಿರೀಕ್ಷೆ ಇದೆ ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು. ಎಸ್ಪಿ ಹರಿರಾಮ್ ಶಂಕರ್, ಎಡಿಸಿ ಅಬಿದ್ ಗದ್ಯಾಲ್, ಜಿಲ್ಲಾ ಅಮೆಚ್ಯೂರ್ ಅತ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಹರಿಪ್ರಸಾದ್ ರೈ, ಜಿಲ್ಲಾ ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಮುಂತಾದವರಿದ್ದರು.