ಸಾರಾಂಶ
ದ.ಕ. ಜಿಲ್ಲೆಯ ಬಂಟ್ವಾಳದ ಸಫರಾ, ಈ ಗ್ಯಾಂಗ್ ವಾರ್‌ನ ಆರೋಪಿಗಳಲ್ಲೊಬ್ಬನಾದ ಇಸಾಕ್ ಎಂಬಾತನಿಗೆ ಆಶ್ರಯ ನೀಡಿದ್ದಳು ಮತ್ತು ಹಣದ ಸಹಾಯ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಎರಡು ತಿಂಗಳ ಹಿಂದೆ ರಾಜ್ಯಾದ್ಯಂತ ಸುದ್ದಿಗೆ ಕಾರಣವಾಗಿದ್ದ ಉಡುಪಿಯ ರಾಹೆಯಲ್ಲಿ ನಡೆದ ಗ್ಯಾಂಗ್ ವಾರ್‌ಗೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.ಬಂಧಿತ ಮಹಿಳೆಯನ್ನು ದ.ಕ. ಜಿಲ್ಲೆಯ ಬಂಟ್ವಾಳದ ಸಫರಾ (35) ಎಂದು ಗುರತಿಸಲಾಗಿದೆ. ಈಕೆ ಈ ಗ್ಯಾಂಗ್ ವಾರ್‌ನ ಆರೋಪಿಗಳಲ್ಲೊಬ್ಬನಾದ ಇಸಾಕ್ ಎಂಬಾತನಿಗೆ ಆಶ್ರಯ ನೀಡಿದ್ದಳು ಮತ್ತು ಹಣದ ಸಹಾಯ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 18ರಂದು ರಾತ್ರಿ ನಗರದ ಕುಂಜಿಬೆಟ್ಟಿನಲ್ಲಿ ಈ ಗ್ಯಾಂಗ್ ವಾರ್ ನಡೆದಿತ್ತು. ರಾಜ್ಯಾದ್ಯಂತ ತನ್ನ ಕುಕೃತ್ಯಗಳಿಂದ ಪೊಲೀಸರಿಗೆ ಬೇಕಾಗಿರುವ ಗರುಡ ಗ್ಯಾಂಗ್ ಇತ್ತೀಚೆಗೆ ಹಣಕಾಸಿನ ವಿಚಾರದಲ್ಲಿ ಆಶೀಕ್ ಮತ್ತು ಅಲ್ಫಾಜ್ ಎಂಬವರ ನೇತೃತ್ವದಲ್ಲಿ ಇಬ್ಭಾಗಗೊಂಡಿದೆ. ಅಂದು ರಾಜಿಗಾಗಿ ಮಣಿಪಾಲಕ್ಕೆ ಆಗಮಿಸಿದ್ದ ಎರಡು ಗ್ಯಾಂಗ್‌ಗಳ ಸದಸ್ಯರು ಮಧ್ಯರಾತ್ರಿ ರಸ್ತೆ ಮಧ್ಯೆ ಹೊಡೆದಾಡಿಕೊಂಡಿದ್ದರು. ಒಂದು ಗ್ಯಾಂಗಿನ ಸದಸ್ಯರು ತಲವಾರು ಹಿಡಿದು ಇನ್ನೊಂದು ಗ್ಯಾಂಗಿನ ಮೇಲೆ ಏರಿ ಹೋಗಿದ್ದರು ಮತ್ತು ಕಾರಿನಿಂದ ಡಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದ್ದರು. ಈ ಘಟನೆಯನ್ನು ಸ್ಥಳೀಯರೊಬ್ಬರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದು ವೈರಲ್ ಆಗಿತ್ತು.ಅದಾದ ಮೇಲೆ ಮೇ 20ರಂದು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಆಶಿಕ್, ರಕಿಬ್, ಸಕ್ಲೈನ್, ಮಜಿದ್, ಅಲ್ಫಾಜ್ ಮತ್ತು ಷರೀಫ್ ಎಂಬವರನ್ನು ಬಂಧಿಸಿದ್ದರು.
ಈ ಘಟನೆಯ ಇನ್ನೊಬ್ಬ ಆರೋಪಿ ಇಸಾಕ್ ಇನ್ನೂ ಪೊಲೀಸರಿಂದ ತಪ್ಪಿಸಿಕೊಂಡಿದ್ದಾನೆ. ಆದರೆ ಆತನಿಗೆ ಆಶ್ರಯ ನೀಡಿದ್ದ ಮತ್ತು ಹಣ ಸಹಾಯ ಮಾಡಿದ್ದ ಸಫರಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.