ಉಡುಪಿ: ಬಡವರಿಗೆ ಫ್ಲಾಟ್ ಮಾದರಿಯ 240 ಮನೆ ಹಸ್ತಾಂತರ

| Published : Mar 03 2024, 01:31 AM IST

ಸಾರಾಂಶ

ರಾಜ್ಯದ 20 ಜಿಲ್ಲೆಗಳಲ್ಲಿ ಕೊಳಚೆಗೇರಿ ಅಭಿವೃದ್ಧಿ ಮಂಡಳಿ ಮೂಲಕ ಪಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಮನೆಗಳನ್ನು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಚುವಲ್ ಆಗಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಣಿಪಾಲಉಡುಪಿ ನಗರಸಭೆಯ ವತಿಯಿಂದ ರಾಜ್ಯ ಕೊಳಚೆಗೇರಿ ಅಭಿವೃದ್ಧಿ ಮಂಡಳಿ ಮೂಲಕ ಇಲ್ಲಿನ ಹೆರ್ಗಾ ಗ್ರಾಮದ ಸರಳೇಬೆಟ್ಟು ವಾರ್ಡಿನ ಬಬ್ಬುಸ್ವಾಮಿ ಕಾಲನಿಯಲ್ಲಿ ನಿರ್ಮಿಸಲಾದ ಫ್ಲಾಟ್‌ ಮಾದರಿಯ 240 ಮನೆಗಳನ್ನು ಶನಿವಾರ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.ರಾಜ್ಯದ 20 ಜಿಲ್ಲೆಗಳಲ್ಲಿ ಕೊಳಚೆಗೇರಿ ಅಭಿವೃದ್ಧಿ ಮಂಡಳಿ ಮೂಲಕ ಪಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಮನೆಗಳನ್ನು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಚುವಲ್ ಆಗಿ ಉದ್ಘಾಟಿಸಿದರು.ಬಬ್ಬುಸ್ವಾಮಿ ಕಾಲನಿಯ ಮನೆಗಳನ್ನು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಉದ್ಘಾಟಿಸಿ, ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಸ್ತಾಂತರಿಸಿದರು.ನಂತರ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಡವರಿಗಾಗಿಯೇ ಈ ಮನೆಗಳನ್ನು ನಿರ್ಮಿಸುತ್ತಿದ್ದು, ಇದಕ್ಕೆ ರಾಜ್ಯದ ಜನತೆಯ ತೆರಿಗೆ ಹಣವನ್ನು ಬ‍ಳಸಿಕೊಳ್ಳಲಾಗಿದೆ. ಆದ್ದರಿಂದ ಈ ಮನೆಗಳನ್ನು ಪಡೆದುಕೊಂಡವರು ಅದರಲ್ಲಿ ವಾಸ ಮಾಡಿ ಸದುಪಯೋಗ ಪಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಪರಭಾರೆ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.ಮುಂದೆ ಇನ್ನೂ 220 ಮನೆಗಳಿಗೆ ಸರ್ಕಾರದಿಂದ ಮಂಜೂರಾತಿ ದೊರಕಿದೆ. ಅವುಗ‍ಳನ್ನು ಶೀಘ್ರ ಪೂರ್ಣಗೊಳಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಹಸ್ತಾಂತರಿಸಬೇಕು. ಕಾಲನಿಗೆ ಅಗತ್ಯವಿರುವ ರಸ್ತೆ, ಪಾರ್ಕ್, ಸಮುದಾಯ ಭವನ, ಇಲ್ಲಿನ ನಿವಾಸಿಗಳ ಮಕ್ಕಳಿಗೆ ಅಗತ್ಯವಿರುವ ಅಂಗನವಾಡಿ, ಮೈದಾನಗಳ ನಿರ್ಮಾಣಕ್ಕೂ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಗರಸಭಾ ಪೌರಾಯುಕ್ತ ರಾಯಪ್ಪ, ಸದಸ್ಯರಾದ ಜಯಲಕ್ಷ್ಮೀ, ಅಮೃತಾ ಕೃಷ್ಣಮೂರ್ತಿ, ಪ್ರಭಾಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಕೊಳಚೆಗೇರಿ ಅಭಿವೃದ್ಧಿ ಮಂಡಳಿಯ ಶಿವಮೊಗ್ಗ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಂಗಯ್ಯ ಬಡಿಗೇರ್ ಸ್ವಾಗತಿಸಿದರು.ಇದಕ್ಕೆ ಮೊದಲು ಆಗಮಿಸಿದ ಶಾಸಕ ಯಶ್ಪಾಲ್ ಸುವರ್ಣ ಅವರು ಸಾಂಕೇತಿಕವಾಗಿ ಒಬ್ಬ ಫಲಾನುಭವಿಗೆ ಮನೆಯ ಕೀಗಳನ್ನು ಹಸ್ತಾಂತರಿಸಿ ಶುಭ ಹಾರೈಸಿದರು.